Monday, January 19, 2026
Google search engine

Homeರಾಜಕೀಯಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ : ಡಿಕೆ ಶಿವಕುಮಾರ್

ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ : ಡಿಕೆ ಶಿವಕುಮಾರ್

ಬೆಂಗಳೂರು : ನಾವೆಲ್ಲಾ ರಾಜಕಾರಣಿಗಳು, ಖಂಡಿತ ರಾಜಕೀಯ ಮಾಡಿಯೇ ಮಾಡುತ್ತೇವೆ. ನಮ್ಮ ಅನುಕೂಲಕ್ಕೆ ಯಾವಾಗ, ಯಾರನ್ನು ಭೇಟಿ ಮಾಡಬೇಕೋ ಮಾಡುತ್ತೇವೆ. ನನ್ನ ಭೇಟಿಗಳ ಮಾಹಿತಿ ನಾನು ಬಹಿರಂಗಪಡಿಸುವುದಿಲ್ಲ. ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ, ಅದನ್ನು ನಾನು ಬಹಿರಂಗಪಡಿಸಲ್ಲ. ನಾನೇಕೆ ಅದನ್ನೆಲ್ಲ ಬಹಿರಂಗಪಡಿಸಲಿ? ಕಾಲವೇ ಉತ್ತರ ನೀಡುತ್ತದೆ ಎಂದಿದ್ದಾರೆ.

ಇನ್ನೂ ಈ ವೇಳೆ ನಾವೆಲ್ಲಾ ರಾಜಕಾರಣಿಗಳು. ನಮ್ಮ ಅನುಕೂಲಕ್ಕೆ ತಕ್ಕಂತೆ ಯಾರನ್ನು ಯಾವಾಗ ಭೇಟಿ ಮಾಡಬೇಕು ಎಂಬುದನ್ನು ನಿರ್ಧರಿಸಿ ಭೇಟಿ ಮಾಡುತ್ತೇವೆ. ಎಲ್ಲರೂ ಅದನ್ನೇ ಮಾಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ದೆಹಲಿಗೆ ಬರುವಾಗಲೂ ನಾವೆಲ್ಲ ಸರ್ಕಾರದ ಕೆಲಸ, ಪಕ್ಷದ ಕೆಲಸ ಹಾಗೂ ರಾಜಕೀಯಕ್ಕಾಗಿಯೇ ಬರುತ್ತೇವೆ. ನೀವು ಯಾಕೆ ಅದನ್ನು ದೊಡ್ಡದು ಮಾಡುತ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್‌ ಅವರು ಜ.18 ರಂದು ಭಾನುವಾರ ನಿಗದಿಯಾಗಿದ್ದ ಸ್ವಿಜರ್‌ಲೆಂಡ್ ದಾವೋಸ್‌ ಪ್ರವಾಸ ರದ್ದುಪಡಿಸಿ, ಭಾನುವಾರ ದೆಹಲಿಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಮೂಡಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಎಂಜಿ-ನರೇಗಾ ಪರ ಪಿಸಿಸಿ ಅಧ್ಯಕ್ಷರ ಸಭೆಯಲ್ಲೂ ಶಿವಕುಮಾರ್‌ ಅವರು ವರ್ಚುಯಲ್‌ ಆಗಿ ಭಾಗವಹಿಸಿದ್ದರು. ಇದನ್ನು ಹೊರತುಪಡಿಸಿ ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್‌ ಅವರು ಸಂಜೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಅಸ್ಸಾಂ ವೀಕ್ಷಕರ ಸಭೆಯಲ್ಲಿ ಭಾಗವಹಿಸಿದ್ದರು. ಶನಿವಾರ ರಾಹುಲ್‌ಗಾಂಧಿ ಭೇಟಿ ಮಾಡಿ ಸಂಜೆ 5 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲು ನಿರ್ಧರಿಸಿದ್ದರು. ಆದರೆ ಹಿರಿಯ ಮುಖಂಡ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನ ಹಿನ್ನೆಲೆಯಲ್ಲಿ ಶನಿವಾರ ಬೀದರ್‌ಗೆ ಆಗಮಿಸಿ, ಮತ್ತೆ ದೆಹಲಿಗೆ ತೆರಳಿದ್ದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular