ಚಿಕ್ಕಮಗಳೂರು : ಆಕಸ್ಮಿಕ ಬೆಂಕಿ ಬಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಸಮೀಪದ ಮಲಯ ಮಾರುತ ಬಳಿ ನಡೆದಿದೆ. ನಿರಂತರ ಗಾಳಿಯಿಂದ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿದೆ. ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿಯುತ್ತಿದ್ದು, ಆತಂಕ ಉಂಟುಮಾಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಗುಡ್ಡದಲ್ಲಿ ಬೀಸುತ್ತಿರುವ ಭಾರೀ ಗಾಳಿಯಿಂದ ಕ್ಷಣದಿಂದ ಕ್ಷಣಕ್ಕೆ ಬೆಂಕಿಯ ಕೆನ್ನಾಲಿಗೆ ಹಬ್ಬುತ್ತಲೇ ಇದ್ದು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಚಾರ್ಮಡಿ ಘಾಟ್ ಸಮೀಪದ ಮಲಯ ಮಾರುತದ ಅರಣ್ಯ ಪ್ರದೇಶದಲ್ಲಿ ಬೆಂಕಿ ರಸ್ತೆಯಿಂದ ೨ ಕಿ.ಮೀ. ದೂರದ ಅರಣ್ಯ ಪ್ರದೇಶದವರೆಗೂ ಹಬ್ಬಿದೆ. ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಅರಣ್ಯ ಪ್ರದೇಶ ಹೊತ್ತಿ ಉರಿದಿದ್ದು, ಚಾರ್ಮಡಿ ಘಾಟಿ ಅರಣ್ಯ ಪ್ರದೇಶದಲ್ಲಿನ ಬೆಂಕಿಯ ಬೆಳಗು ಮುಖ್ಯ ರಸ್ತೆಯವರೆಗೂ ಕಾಣುತ್ತಿತ್ತು ಎನ್ನಲಾಗಿದೆ.
ಕಾಡ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಅತ್ಯಮೂಲ್ಯ ಗಿಡ ಮೂಲಿಕೆ ಸಸ್ಯಗಳು ಕೂಡ ಬೆಂಕಿಯಲ್ಲಿ ಬೆಂದು ಹೋಗಿವೆ. ನೂರಾರು ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿವೆ. ಅರಣ್ಯ ಅಧಿಕಾರಿಗಳು ಹೇಳುವ ಪ್ರಕಾರ, ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಲು ನಿಖರವಾದ ಕಾರಣ ತಿಳಿದು ಬಂದಿಲ್ಲ. ಚಾರ್ಮಡಿ ಗುಡ್ಡದ ಗಾಳಿಗೆ ಹರಡುತ್ತಿರುವ ಬೆಂಕಿಯ ಜ್ವಾಲೆ ಆತಂಕ ಮೂಡಿಸಿದ್ದು, ಈ ಕ್ಷಣದವರೆಗೂ ಕೂಡ ಬೆಂಕಿ ತನ್ನ ರೌದ್ರ ನರ್ತನ ಮುಂದುವರಿದಿದೆ.
ಪ್ರತಿ ಬೇಸಿಗೆ ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಡಿ ಘಾಟ್ ಪ್ರದೇಶದಲ್ಲಿ ಹಾಗೂ ಮುಳ್ಳಯ್ಯನಗಿರಿ ಪ್ರದೇಶ ಮತ್ತು ಚುರ್ಚೆ ಗುಡ್ಡ ಹಾಗೂ ಇತರೇ ಪ್ರದೇಶದಲ್ಲಿ ಬೆಂಕಿಯ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಮೂಡಿಗೆರೆ ತಾಲೂಕಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಬೀಳುತ್ತಿತ್ತು. ಅದು ಈ ವರ್ಷದ ಪ್ರಾರಂಭದಲ್ಲೇ ಮತ್ತೊಮ್ಮೆ ಸಾಬೀತು ಆಗಿದ್ದು, ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ ಎನ್ನಲಾಗಿದೆ.
ಆದರೆ ಚಳಿಗಾಲದಲ್ಲಿ ಕಾಡ್ಗಿಚ್ಚು ಹಬ್ಬಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದ್ದು, ಉದ್ದೇಶಪೂರ್ವಕವಾಗಿ ಯಾರಾದರೂ ಅರಣ್ಯಕ್ಕೆ ಬೆಂಕಿ ಇಟ್ಟಿದ್ದಾರೆಯೇ ಅಥವಾ ಬಿದಿರುಗಳ ಮಧ್ಯೆ ಸಂಘರ್ಷ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆಯೇ ಎಂಬ ಸಂಶಯ ಮೂಡಿದೆ.



