ಮೈಸೂರು: ಸಾಗರದಾಳಕ್ಕೆ ಹೆಚ್ಚು ಪ್ಲಾಸ್ಟಿಕ್ ಸೇರುತ್ತಿದ್ದು, ಇದೇ ರೀತಿ ಮುಂದುವರೆದರೆ ಜಗತ್ತಿನ ಸಾಗರಗಳು ಕಸದ ಆಗರಗಳಾಗಲಿವೆ. ಇದರಿಂದ ಜೀವ ವೈವಿಧ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಎಂದು ಭಾರತೀಯ ಪಲ್ಪ್ ಮತ್ತು ಕಾಗದ ತಾಂತ್ರಿಕ ಸಂಘದ (ಇಪ್ಟಾ) ಅಧ್ಯಕ್ಷ ಗಣೇಶ್ ಭಡ್ತಿ ಕಳವಳ ವ್ಯಕ್ತಪಡಿಸಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಗುರುವಾರ ಇಪ್ಟಾ (ಇಂಡಿಯನ್ ಪಲ್ಪ್ ಅಂಡ್ ಪೇಪರ್ ಟೆಕ್ನಿಕಲ್ ಅಸೋಸಿಯೇಷನ್) ಸಹಯೋಗದಲ್ಲಿ ಆಯೋಜಿಸಿದ್ದ ಆಹಾರದ ಪ್ಯಾಕೇಜಿಂಗ್‌ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬದಲು ಕಾಗದ ಬಳಕೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾರ್ಷಿಕ ೬೦ ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಶೇ.೭ರಷ್ಟು ಮಾತ್ರ ಪುನರ್‌ಬಳಕೆಯಾಗುತ್ತಿದೆ. ಉಳಿದ ಶೇ.೯೨ರಷ್ಟು ಪ್ಲಾಸ್ಟಿಕ್ ಜಲಮೂಲಗಳು, ಸಾಗರಗಳ ಒಡಲು ಸೇರುತ್ತಿದೆ. ಇದೇ ಪ್ರಮಾಣ ಮುಂದುವರಿದರೆ ೨೫ ವರ್ಷದ ಹಿಂದೆ ಉತ್ತರ ಫೆಸಿಫಿಕ್ ಸಾಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ದ್ವೀಪ ನಿರ್ಮಾಣವಾಗಿರುವುದನ್ನು ಬ್ರಿಟನ್‌ನ ಸಾಗರ ವಿಜ್ಞಾನಿಯೊಬ್ಬರು ಗುರುತಿಸಿ ಜಾಗತಿಕ ಸಮುದಾಯವನ್ನು ಎಚ್ಚರಿಸಿದ್ದರು. ಇಂದು ಗ್ರೇಟ್ ಫೆಸಿಫಿಕ್ ಗಾರ್ಬೇಜ್ ೧೬ ಲಕ್ಷ ಚದರ ಕಿ.ಮೀ ವ್ಯಾಪಿಸಿದೆ. ಹವಾಯಿ ದ್ವೀಪಗಳಿಂದ ಕ್ಯಾಲಿಫೋರ್ನಿಯಾದವರೆಗೆ ತ್ಯಾಜ್ಯದ ಸಾಗರ ಪಟ್ಟಿ ನಿರ್ಮಾಣವಾಗಿದೆ. ಹೀಗಾಗಿ ಪ್ಲಾಸ್ಟಿಕ್ ಬದಲು ನೈಸರ್ಗಿಕವಾಗಿ ಕರಗುವ ಕಾಗದ ಬಳಕೆಯನ್ನು ಹೆಚ್ಚಿಸಬೇಕಿರುವುದು ಜಾಗತಿಕ ತುರ್ತು ಎಂದು ಹೇಳಿದರು.
ತ್ಯಾಜ್ಯದ ದ್ವೀಪಗಳು ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಸಮುದ್ರಗಳನ್ನೂ ನಿರ್ಮಿಸುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯದ ಕಣಗಳು ನೀರು, ಗಾಳಿ, ಮಣ್ಣಿನಲ್ಲಿ ಬೆರೆತಿವೆ. ಇನ್ನು ೫ ದಶಕದಲ್ಲಿ ಪ್ಲಾಸ್ಟಿಕ್ ನಮ್ಮ ಆರೋಗ್ಯವನ್ನು ಇನ್ನಿಲ್ಲದಂತೆ ಕಾಡಲಿದೆ. ಆಹಾರದ ಪ್ಯಾಕೇಜಿಂಗ್‌ನಲ್ಲಿ ಕಾಗದದ ಬಳಕೆ ಹೆಚ್ಚಿಸಬೇಕು. ಕಾಗದ ಉದ್ಯಮಗಳು ಪ್ಲಾಸ್ಟಿಕ್ ಬಳಕೆಯ ಸ್ಥಾನವನ್ನು ಪರಿಣಾಮಕಾರಿಯಾಗಿ ತುಂಬಬೇಕು ಎಂದರು.
ದೇಶದ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಕೆಲಸದಲ್ಲಿ ಕಳೆದ ಐದು ದಶಕಗಳಿಂದ ನಿರಂತರ ಸಂಶೋಧನೆ ಹಾಗೂ ಆವಿಷ್ಕಾರಗಳನ್ನು ಸಿಎಫ್‌ಟಿಆರ್‌ಐ ಕೈಗೊಂಡಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ಸಂಸ್ಥೆಯ ಪಾತ್ರ ಅನನ್ಯ. ಆತ್ಮನಿರ್ಭರ ಭಾರತದ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ಶ್ಲಾಘಿಸಿದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಸಿಂಗ್ ಮಾತನಾಡಿ, ಕಾಗದ ತೇವಾಂಶವನ್ನು ಬೇಗನೆ ಹೀರಿಕೊಳ್ಳುವುದರಿಂದ ಆಹಾರಗಳು ಕೆಡುತ್ತವೆ. ಆಹಾರ ಸಂರಕ್ಷಣೆಯಲ್ಲಿ ಪ್ಯಾಕೇಜಿಂಗ್ ಪಾತ್ರ ಮುಖ್ಯವಾಗುತ್ತದೆ. ಸಿಎಫ್‌ಟಿಆರ್‌ಐ ಹೊಸ ಆವಿಷ್ಕಾರಗಳಿಂದ ಪ್ಯಾಕೇಜಿಂಗ್‌ನಲ್ಲಿ ಕಾಗದವನ್ನೇ ಬಳಸುತ್ತಿದೆ ಎಂದರು.
ಬಂಗಾಳದ ಭೀಕರ ಬರಗಾಲ, ಎರಡನೇ ಮಹಾಯುದ್ಧದ ನಂತರ ಆಹಾರದಲ್ಲಿ ಸ್ವಾವಲಂಬನೆ ಹಾಗೂ ಪೌಷ್ಟಿಕ ಆಹಾರಕ್ಕಾಗಿ ಸಂಶೋಧನೆ ನಡೆಸಲು ಭಾರತ ಸರ್ಕಾರ ೭೩ ವರ್ಷದ ಹಿಂದೆ ಸಂಸ್ಥೆಯನ್ನು ಸ್ಥಾಪಿಸಿತು. ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಸಂಸ್ಥೆ ನೆರವಾಗಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಐಟಿಸಿ ಕಂಪನಿ ಉಪ ಪ್ರಧಾನ ವ್ಯವಸ್ಥಾಪಕ ಪಿ.ಎನ್.ಶ್ರೀಧರ್, ಇಪ್ಟಾ ಕಾರ್ಯದರ್ಶಿ ಎಂ.ಕೆ.ಗೋಯಲ್, ಕಾರ್ಯಕ್ರಮ ಸಮಿತಿ ಮುಖ್ಯಸ್ಥ ಪ್ರೊ.ರಾಜೇಶ್ವರ್ ಎಸ್.ಮಟ್ಚೆ, ಐಪಿಎಂಎ ಅಧ್ಯಕ್ಷ ಪವನ್ ಅಗರ್‌ವಾಲ್ ಇದ್ದರು.