Monday, January 19, 2026
Google search engine

Homeಸ್ಥಳೀಯಅಂಬೇಡ್ಕರ್ ಪೂಜ್ಯವಲ್ಲ, ಸ್ಪೂರ್ತಿಯ ಚಿಲುಮೆ: ಹೆಚ್.ಸಿ.ಮಹದೇವಪ್ಪ

ಅಂಬೇಡ್ಕರ್ ಪೂಜ್ಯವಲ್ಲ, ಸ್ಪೂರ್ತಿಯ ಚಿಲುಮೆ: ಹೆಚ್.ಸಿ.ಮಹದೇವಪ್ಪ

ಕೆ.ಆರ್.ನಗರ : ಡಾ.ಬಿ.ಆರ್.ಅಂಬೇಡ್ಕರ್ ಅವರು ಪೂಜಿಸುವ ವಸ್ತುವಾಗಿರದೆ ಅವರು ನಮಗೆಲ್ಲಾ ಸ್ಪೂರ್ತಿ ಯ ಚಿಲುಮೆ ಎಂದು ಸಮಾಜ ಕಲ್ಯಾಣ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ಸಾಲಿಗ್ರಾಮ ತಾಲೂಕಿನ ಬಳ್ಳೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ನಿರ್ಮಿಸಿರುವ ಬಾಬಾ ಸಾಹೇಬರ ಪ್ರತಿಮೆ ಅನಾವರಣಗೊಳಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶ ವಿದೇಶಗಳಲ್ಲಿ ಅಧ್ಯಾಯನ ಮಾಡಿ ತಮ್ಮ ಜ್ಞಾನವನ್ನು ಭಾರತದ ಜನರಿಗೆ ಧಾರೆ ಎರೆದ ಸಂವಿಧಾನ ಶಿಲ್ಪಿ ಪ್ರಜಾಪ್ರಭುತ್ವದ ಪಿತಾಮಹ ಎಂದರು.
ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೀಮಿತವಾಗದೆ ರಾಷ್ಟ್ರದ ಸರ್ವ ಜನಾಂಗದವರ ಆಸ್ತಿಯಾಗಿದ್ದು ಅಂತಹ ಮಹಾನುಭಾವನ ಜೀವನದ ಸಂಕಷ್ಠ ಸಾಧನೆ ಮತ್ತು ಸಾರಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಸರ್ವರೂ ಸಹೋದರತ್ವದಿಂದ ಬದುಕಬೇಕು ಎಂದು ಹೇಳಿದ ಆಶಯವನ್ನು ಈಡೇರಿಸುವಲ್ಲಿ ನಾವು ವಿಫಲರಾಗಿದ್ದು ಜಾತಿ ವ್ಯವಸ್ಥೆಯೇ ಎಂದು ವಿಷಾದಿಸಿದ ಸಚಿವರು ಅಂತಹ ಸಾಂಸ್ಕೃತಿಕ ನಾಯಕನ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಪ್ರಜಾಪ್ರಭುತ್ವದ ಯಶಸ್ಸು ಅಡಕವಾಗಿರುವುದು ಪ್ರಶ್ನಿಸುವ ಜಯಮಾನದಲ್ಲಿ ಎಂದ ಹೆಚ್.ಸಿ.ಮಹದೇವಪ್ಪ, ಸಂವಿಧಾನ‌ ರಕ್ಷಣೆ ಮಾಡಲು ಜನರು ಜಾಗೃತರಾಗಬೇಕು ಎಂದರಲ್ಲದೆ ಅದನ್ನು ಬದಲಿಸಲು ಹೊರಟಿರುವವರಿಗೆ ಬುದಿಕಲಿಸಬೇಕು ಎಂದು ಕರೆ ನೀಡಿದರು.

ಶಾಸಕ ಡಿ.ರವಿಶಂಕರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ನಮಗೆ ಸರ್ವವನ್ನು ಒದಗಿಸಿಕೊಟ್ಟಿದ್ದು ಅದಕ್ಕೆ ನಾವು ಸದಾ ಅಬಾರಿಯಾಗಿರಬೇಕು ಎಂದರು.
ಭಾರತದ ಎಲ್ಲ ಜನರು ಸಮಾನತೆಯಿಂದ ಬದುಕಲು ಅನುಕೂಲವಾಗುವಂತಹ ಸಂವಿಧಾನ ರಚಿಸಿ ಕೊಟ್ಟ ಜ್ಞಾನಸೂರ್ಯ ನಮ್ಮ ದೇಶದಲ್ಲಿ ಜನಿಸಿರುವುದು ಪುಣ್ಯ ವಿಶೇಷ ಎಂದು ಬಣ್ಣಿಸಿದ ಶಾಸಕರು ಗ್ರಾಮದ ಜನತೆಯ ಬಹುದಿನಗಳ‌ ಬೇಡಿಕೆಯಾಗಿರುವ ಸಂವಿಧಾನ ಶಿಲ್ಪಿಯ ಪ್ರತಿಮೆ ಅನಾವರಣ ಮಾಡುತ್ತಿರುವುದು ಸಂತಸದ ವಿಚಾರ ಎಂದು ನುಡಿದರು.

ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಗೆ 5 ಕೋಟಿ ರೂಗಳ ಅವಶ್ಯಕತೆ ಇದ್ದು ನಾನು ಈಗಾಗಲೇ ಶಾಸಕರ ನಿಧಿಯಿಂದ 1 ಕೋಟಿ ಹಣ ನೀಡಿದ್ದು ಉಳಿದ 4 ಕೋಟಿ ರೂಗಳನ್ನು ಕೊಡಬೇಕೆಂದು ಮನವಿ ಮಾಡಿಕೊಂಡರು.
ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಅಂಬೇಡ್ಕರ್ ಸಮುದಾಯ ಭವನಗಳಲ್ಲಿಯೂ ಡಿಜಿಟಲ್ ಗ್ರಂಥಾಲಯ ಆರಂಭಿಸುವುದಾಗಿ ಘೋಷಿಸಿದ ಡಿ.ರವಿಶಂಕರ್ ಬಳ್ಳೂರು ಗ್ರಾಮದ ಸಿಸಿ ರಸ್ತೆ ಕಾಮಗಾರಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದಾಗ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಕೂಡಲೇ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.

ಕೂಡೂರಿನ ನಳಂದ ಬುದ್ಧ ವಿಹಾರದ ಬಂತೇ ಬೋದಿರತ್ನ, ಜಿ.ಪಂ.ಮಾಜಿ ಸದಸ್ಯ ಅಚ್ಚುತಾನಂದ, ಗ್ರಾ.ಪಂ.ಅಧ್ಯಕ್ಷೆ ಭವಾನಿನರೇಂದ್ರ, ಸದಸ್ಯ ಕೃಷ್ಣ, ಪಿಡಿಒ ಷಡಕ್ಷರಿ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಆರ್.ಕಾಂತರಾಜು, ತಾಲೂಕು ಅಧ್ಯಕ್ಷ ಬಿ.ಎಂ.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ಎಸ್ ಸಿ ಘಟಕದ ಅಧ್ಯಕ್ಷರಾದ ಕಂಠಿಕುಮಾರ್, ನಂದೀಶ್, ಡಿಎಸ್ ಎಸ್ ಸಂಚಾಲಕ ಕೆ.ಚಂದ್ರು, ತಾ.ಪಂ.ಮಾಜಿ ಸದಸ್ಯ ಸಣ್ಣಪ್ಪ, ಅಂಬೇಡ್ಕರ್ ಸಂಘದ ಪದಾಧಿಕಾರಿಗಳಾದ ಬಿ.ಆರ್.ಮಧು, ಬಿ.ಎಸ್.ಸ್ವಾಮಿ, ಅನಿಲ್‌ಕುಮಾರ್, ಸಚಿನ್, ಪ್ರಜ್ವಲ್, ರಾಮಚಂದ್ರ, ಯೋಗೀಶ್, ಭರತ್, ನವೀನ್, ಗ್ರಾಮದ ಮುಖಂಡರಾದ ಕೃಷ್ಣಯ್ಯ, ದೇವಯ್ಯ, ಬಿ.ಟಿ.ರಮೇಶ್, ತಹಶೀಲ್ದಾರ್ ರುಕೀಯಾಬೇಗಂ, ತಾ.ಪಂ.ಇಒ ಎ.ಎನ್.ರವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಲ್.ಶಂಕರಮೂರ್ತಿ ಸೇರಿದಂತೆ ಗ್ರಾಮದ ಯಜಮಾನರು ಮತ್ತು ಮುಖಂಡರು ಹಾಜರಿದ್ದರು.

ಕೆ.ಆರ್.ನಗರ : ಪಟ್ಟಣದ ಆಂಜನೇಯ ಬಡಾವಣೆ ಯಲ್ಲಿರುವ ಇಂದಿರಾ ಗಾಂದಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಪವಿತಾ.ಪಿ. ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ವಿಚಾರದ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮಕ್ಕೆ ಸೂಚನೆ ನೀಡುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದರು.
ವಸತಿ ಶಾಲೆಯ ವಿದ್ಯಾರ್ಥಿಗಳಿ ಕಳೆದ ನಾಲ್ಕು ದಿನಗಳ ಹಿಂದೆ ಪ್ರಾಂಶುಪಾಲರ ವಿರುದ್ದ ಕಿರುಕುಳ ಖಂಡಿಸಿ ಪ್ರತಿಭಟನೆ ನಡೆಸಿರುವ ವಿಚಾರದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಈ ಪ್ರತಿಕ್ರಿಯೆ ನೀಡಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿ ಬಡವರಿಗೆ ಅನ್ಯಾಯ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕಾಯ್ದೆ ರದ್ದಾಗುವವರೆಗೂ ಹೋರಾಟ ಮಾಡಿ ತಾರ್ತಿಕ ಅಂತ್ಯಕ್ಕೆ ಕೊಂಡೋಯುವುದಾಗಿ ತಿಳಿಸಿದರು.
ಚುಂಚನಕಟ್ಟೆ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗುವಂತೆ ಸರ್ಕಾರದಿಂದ ನೋಟಿಸ್ ನೀಡಲಾಗುತ್ತದೆ ಎಂದ ಸಚಿವರು ಶಾಸಕರು ಮತ್ತು ಅಧಿಕಾರಿಗಳು ನಿಗಧಿತವಾಗಿ ಕೆಡಿಪಿ ಸಭೆ ಮಾಡುತ್ತಿದ್ದು ಮುಂದೆ ನಾನು ಬಂದು ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತೇನೆ ಎಂದರು.

ಶಾಸಕ ಡಿ.ರವಿಶಂಕರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಅವರ ಜನಪರ ಮತ್ತು ಬಡವರ ಪರವಾದ ಕಾಳಜಿ ಇತರರಿಗೆ ಮಾದರಿಯಾಗಿದ್ದು ಮುಂಬರುವ‌ ವಿಧಾನ ಸಭಾ ಚುನಾವಣೆಯಲ್ಲಿ ಅವರು ಕಳೆದ ಸಾಲಿಗಿಂತ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ಭವಿಷ್ಯ‌ ನುಡಿದರು.

RELATED ARTICLES
- Advertisment -
Google search engine

Most Popular