ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರನ್ನು ಸ್ವಾಗತಿಸಿದ್ದಾರೆ. ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೋಮವಾರ ಸುಮಾರು 2 ಗಂಟೆಗಳ ಅಧಿಕೃತ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಇಬ್ಬರೂ ನಾಯಕರು ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸವಾದ 7, ಲೋಕ ಕಲ್ಯಾಣ್ ಮಾರ್ಗ್ ಗೆ ತೆರಳಿ ಚರ್ಚೆ ನಡೆಸಿದರು ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಈ ಸಭೆಯಲ್ಲಿ, ಭಾರತ ಮತ್ತು ಯುಎಇ ನಡುವೆ ರಕ್ಷಣೆ, ಬಾಹ್ಯಾಕಾಶ, ಇಂಧನ, ಸೂಪರ್ ಕಂಪ್ಯೂಟಿಂಗ್ ಮತ್ತು ಆಹಾರ ಸುರಕ್ಷತೆ ಕ್ಷೇತ್ರ ಸೇರಿಂದತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಯುಎಇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶೇಖ್ ಮೊಹಮ್ಮದ್ ಅವರ ಭಾರತಕ್ಕೆ ಇದು ಮೂರನೇ ಅಧಿಕೃತ ಭೇಟಿಯಾಗಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ನನ್ನ ಸಹೋದರ, ಯುಎಇ ಅಧ್ಯಕ್ಷರಾದ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರ ಭೇಟಿಯು ಬಲವಾದ ಭಾರತ-ಯುಎಇ ಸ್ನೇಹಕ್ಕೆ ಅವರು ನೀಡುವ ಮಹತ್ವವನ್ನು ವಿವರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಉಭಯ ನಾಯಕರ ಸಭೆಯಲ್ಲಿ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆ, ಬಾಹ್ಯಾಕಾಶ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅದರ ವಾಣಿಜ್ಯೀಕರಣದ ಜಂಟಿ ಉಪಕ್ರಮಗಳು ಮತ್ತು ಗುಜರಾತ್‌ನ ಧೋಲೆರಾದಲ್ಲಿ ವಿಶೇಷ ಹೂಡಿಕೆ ಪ್ರದೇಶದ ಅಭಿವೃದ್ಧಿಯಲ್ಲಿ ಯುಎಇ ಭಾಗವಹಿಸುವಿಕೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.



