Tuesday, January 20, 2026
Google search engine

Homeರಾಜಕೀಯಅಬಕಾರಿ ಇಲಾಖೆ ಕಾಂಗ್ರೆಸ್ ಪಾಲಿನ ಎಟಿಎಂ ಯಂತ್ರ : ಆರ್‌.ಅಶೋಕ್ ಕಿಡಿ

ಅಬಕಾರಿ ಇಲಾಖೆ ಕಾಂಗ್ರೆಸ್ ಪಾಲಿನ ಎಟಿಎಂ ಯಂತ್ರ : ಆರ್‌.ಅಶೋಕ್ ಕಿಡಿ

ಬೆಂಗಳೂರು: ಅಬಕಾರಿ ಇಲಾಖೆ ಕಾಂಗ್ರೆಸ್ ಪಾಲಿನ ಪರ್ಸೆಂಟೇಜ್ ದಂಧೆಯ ಎಟಿಎಂ ಯಂತ್ರವಾಗಿ ಬದಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದು, ಈ ಕುರಿತ ವರದಿಯೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಆರ್.ಅಶೋಕ್, ಅಧಿಕಾರಿಗಳ ವರ್ಗಾವಣೆಯಿಂದ ಹಿಡಿದು, ಮದ್ಯದಂಗಡಿಗಳ ಲೈಸೆನ್ಸ್ ಮಂಜೂರಾತಿಯವರೆಗೆ ಪ್ರತಿಯೊಂದಕ್ಕೂ ಇಲ್ಲಿ ಲಂಚದ ಮುದ್ರೆ ಅನಿವಾರ್ಯವಾಗಿದೆ. ಲಂಚ ನೀಡದೆ ಒಂದು ಕಡತವೂ ಕದಲುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಮದ್ಯದ ಅಂಗಡಿಗಳಿಂದ ಮಂಥ್ಲಿ ಮನಿ ಹೆಸರಿನಲ್ಲಿ ನಡೆಯುತ್ತಿರುವ ಬಲವಂತದ ವಸೂಲಿ ದಂಧೆಯಲ್ಲಿ ಬರೋಬ್ಬರಿ ₹2,500 ಕೋಟಿ ರೂಪಾಯಿಗಳ ಬೃಹತ್ ಹಗರಣ ಎಂಬ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಈ ಕುರಿತು ರಾಜ್ಯ ಮದ್ಯ ಮಾರಾಟಗಾರರ ಸಂಘವೇ ಈ ಬಗ್ಗೆ ಲಿಖಿತ ದೂರು ನೀಡಿರುವುದು, ಕೈಬೆಚ್ಚಗೆ ಮಾಡದಿದ್ದರೆ ಸುಳ್ಳು ಕೇಸ್ ಹಾಕಿ ಟಾರ್ಗೆಟ್ ಮಾಡಲಾಗುತ್ತದೆ ಎಂದು ಬಾರ್ ಮಾಲೀಕರೊಬ್ಬರು ಲೋಕಾಯುಕ್ತದ ಮೆಟ್ಟಿಲೇರಿರುವುದು ಇಲಾಖೆಯ ಕರ್ಮಕಾಂಡಕ್ಕೆ ಸ್ಪಷ್ಟ ಸಾಕ್ಷಿಗಳಾಗಿವೆ.

ಮುಂದುವರೆದು ಇಷ್ಟಾದರೂ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದೀರಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಸರ್ಕಾರಕ್ಕೆ ನಾಚಿಕೆ ಅನ್ನೋದೇ ಇಲ್ಲವೇ? ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಯಾವಾಗಲೂ ನನ್ನದು ತೆರೆದ ಪುಸ್ತಕ ಎಂದು ಬಡಾಯಿ ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಇಷ್ಟೊಂದು ಗಂಭೀರ ಆರೋಪಗಳಿದ್ದರೂ, ದಾಖಲೆಗಳಿದ್ದರೂ ನಿಮ್ಮ ಈ ಮೌನದ ಹಿಂದಿನ ರಹಸ್ಯವೇನು? ನಿಮ್ಮ ಮೂಗಿನ ನೇರಕ್ಕೇ ಇಷ್ಟು ದೊಡ್ಡ ಅಕ್ರಮ ನಡೆಯುತ್ತಿದ್ದರೂ ನೀವು ಯಾಕೆ ಮೌನವಾಗಿದ್ದೀರಿ? ಈ ಲೂಟಿಯಲ್ಲಿ ನಿಮ್ಮ ಪಾಲೆಷ್ಟು ಎಂಬ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ. ಬಾರ್, ಪಬ್, ಕ್ಲಬ್‌ಗಳಿಂದ ಮಂಥ್ಲಿ ಮನಿ ವಸೂಲಿ ಮಾಡುವ ಭ್ರಷ್ಟ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಲು ನಿಮಗಿರುವ ಅಡ್ಡಿಯಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲದೆ ದಿವಾಳಿ ಆಗಿರುವ ಸರ್ಕಾರದ ಖಜಾನೆ ತುಂಬಿಸಲು ರಾಜ್ಯದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯಲು ಅವಕಾಶ ನೀಡಲಾಗಿದ್ದು, ಈ ಸರ್ಕಾರದ ಹಣದ ದಾಹಕ್ಕೆ ರಾಜ್ಯದ ಯುವಜನತೆಯ ಭವಿಷ್ಯ ಬಲಿಯಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಮದ್ಯದ ದಂಧೆ ಹರಡುತ್ತಿದ್ದು, ಸಣ್ಣ ಮಕ್ಕಳು ಮತ್ತು ವಿದ್ಯಾರ್ಥಿಗಳು ಕುಡಿತದ ದಾಸರಾಗುತ್ತಿದ್ದಾರೆ.

ಮದ್ಯಪಾನದ ಮದದಿಂದ ಸಂಭವಿಸುತ್ತಿರುವ ಅಪಘಾತಗಳು ಕುಟುಂಬಗಳನ್ನು ಬೀದಿಗೆ ತಳ್ಳುತ್ತಿವೆ. ಇಷ್ಟೆಲ್ಲಾ ಅವಾಂತರಗಳು ಸಂಭವಿಸುತ್ತಿದ್ದರೂ, ಅಬಕಾರಿ ಇಲಾಖೆಯ ಅಧಿಕಾರಿಗಳು ಕೇವಲ ವಸೂಲಿಯಲ್ಲೇ ಮಗ್ನರಾಗಿದ್ದಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಸರ್ಕಾರ ಕೂಡಲೇ ಎಚ್ಚೆತ್ತು ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆದು ಸಮಗ್ರ ತನಿಖೆಗೆ ಆದೇಶಿಸಬೇಕು. ಭ್ರಷ್ಟರನ್ನು ರಕ್ಷಿಸುವುದೇ ನಿಮ್ಮ ಗುರಿಯಾಗಿದ್ದರೆ, ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಸುಧಾರಿಸಿಕೊಳ್ಳಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular