ಮೈಸೂರು: ಅಂಗಾಂಗ ಕಸಿ ಮಾಡಲು ಅಂಗದಾನದ ಕೊರತೆ ಭಾರತದಲ್ಲಿ ಅತಿ ಹೆಚ್ಚಾಗಿ ಕಾಡುತ್ತಿದೆ. ಒಂದು ಅಂದಾಜಿನ ಪ್ರಕಾರ ಲಕ್ಷಾಂತರ ಮಂದಿ ಅಂಗ ವೈಫಲ್ಯದಿಂದ ಬಳಲುತ್ತಿದ್ದು, ವಾರ್ಷಿಕವಾಗಿ ಕೇವಲ ೩,೫೦೦ರಷ್ಟು ಮಾತ್ರ ಅಂಗಾಂಗ ಕಸಿ ನಡೆಯುತ್ತಿವೆ ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆಯ ಹೆಪಾಟೊ ಬೈಲರಿ ಮತ್ತು ಲಿವರ್ ಕಸಿ ಶಸ್ತ್ರಚಿಕಿತ್ಸಕ ಡಾ.ವಿ.ಯಶವಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಅಂಗಾಗ ದಾನ ಮಹತ್ವ ಕುರಿತು ಮಾತನಾಡಿದ ಅವರು, ದಿನನಿತ್ಯ ಕನಿಷ್ಠ ೧೫ ರೋಗಿಗಳು ಅಂಗದಾನದ ನಿರೀಕ್ಷೆಯಲ್ಲೇ ಸಾವನ್ನಪ್ಪುತ್ತಿದ್ದಾರೆ. ಅಂಗದಾನದ ನಿರೀಕ್ಷೆಯ ಪಟ್ಟಿಗೆ ಪ್ರತಿ ೧೦ ನಿಮಿಷಕ್ಕೆ ಹೊಸ ಹೆಸರು ಸೇರ್ಪಡೆಯಾಗುತ್ತಿವೆ. ಅಂಗಾಂಗ ದಾನದ ಸಾವನ್ನು ಸರಿಪಡಿಸಲು ಅಂಗದಾನದ ಕುರಿತು ಅರಿವು ಮೂಡಿಸುವುದೊಂದೇ ದಾರಿ. ಹೆಚ್ಚು ಸಂಭಾವ್ಯ ದಾನಿಗಳು ಇದ್ದಲ್ಲಿ ಅಂಗಾಂಗಳು ಲಭ್ಯವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ತಿಳಿಸಿದರು.
ಅಂತಿಮ ಘಟ್ಟದಲ್ಲಿರುವ ಅನೇಕ ಅಂಗಾಂಗ ರೋಗಗಳಿಗೆ, ಅಂಗಾಂಗ ಕಸಿಯೇ ಸೂಕ್ತ ಆದ್ಯತೆಯ ಚಿಕಿತ್ಸೆಯಾಗಿರುತ್ತದೆ. ಆದರೆ, ಅಂಗಕಸಿಯ ಬೇಡಿಕೆಗೆ ತಕ್ಕಂತೆ ಸದ್ಯ ಅಗತ್ಯವಿರುವ ಅಂಗಾಂಗಗಳು ಮಾತ್ರ ಅತಿ ಕಡಿಮೆ. ಆದ್ದರಿಂದ ಮೈಸೂರಿನ ಅಪೋಲೊ ಆಸ್ಪತ್ರೆ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು.
ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಕನ್ಸಲ್ಟಂಟ್ ನೆಫ್ರಾಲಜಿಸ್ಟ್ ಡಾ.ಶ್ರೀನಿವಾಸ್ ನಲ್ಲೂರ್ ಮಾತನಾಡಿ, ಅಂತಿಮ ಘಟ್ಟದ ಅಂಗಾಂಗ ವೈಫಲ್ಯದಿಂದ ಪ್ರತಿ ವರ್ಷ ಸಾವಿರಾರು ಮಂದಿ ಮೃತಪಡುತ್ತಿದ್ದಾರೆ. ಅವರು ಬದುಕುಳಿಯಲು ಇರುವ ಒಂದೇ ದಾರಿ ಅಂಗಾಂಗ ಕಸಿ. ಒಬ್ಬ ದಾನಿ ಕನಿಷ್ಠ ಎಂಟು ಮಂದಿಗೆ ಜೀವದಾನ ಮಾಡಬಹುದು. ಈಗ ಸದ್ಯಕ್ಕೆ ಅಂಗಾಂಗಗಳ ತೀವ್ರ ಕೊರತೆ ಕಾಡುತ್ತಿದೆ. ಅಂಗದಾನ ಹಾಗೂ ಅಂಗ ಕಸಿಗಾಗಿ ಕಾಯುತ್ತಿರುವರ ರೋಗಿಗಳ ಸಂಖ್ಯೆಯ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದರು.
ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ, ಯೂನಿಟ್ ಹೆಡ್ ಎನ್.ಜಿ.ಭರತೀಶ ರೆಡ್ಡಿ ಸೇರಿದಂತೆ ಮತ್ತಿತರರಿದ್ದರು.