ಮೈಸೂರು: ಎಸ್‌ಸಿಪಿ, ಟಿಎಸ್‌ಪಿಗೆ ಮೀಸಲಿರಿಸಿದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನದ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ತುಳಿತಕ್ಕೊಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ವಿಶೇಷ ಕಾಯ್ದೆ ಜಾರಿಗೆ ತಂದಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಮೀಸಲಿರಿಸಿದ್ದ ಹಣವನ್ನು ದುರ್ಬಳಕೆ ಮಾಡುತ್ತಾ ಶೋಷಿತರ ಹೆಸರಿನಲ್ಲಿ ಅನ್ಯಾಯವೆಸಗಿದ್ದರು. ಇದನ್ನು ಪ್ರಶ್ನಿಸಿದ್ದವರೇ ಇಂದು ಯೋಜನೆಗೆ ಮೀಸಲಿರಿಸಿದ್ದ ೧೧ ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆ ಸೇರಿದಂತೆ ಅನ್ಯ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಹಕ್ಕೊತ್ತಾಯಗಳು: ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಮೀಸಲಿರಿಸಿದ ಹಣವನ್ನು ಬೇರೆ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಯೋಜನೆಯ ಹಣವನ್ನು ಕಾಯ್ದೆಗೆ ವಿರುದ್ಧವಾಗಿ ದುರ್ಬಳಕೆ ಮಾಡುವ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ಡಾ.ಬಿ.ಎಚ್.ಚನ್ನಕೇಶವಮೂರ್ತಿ, ಕೆ.ವಿ. ದೇವೇಂದ್ರ, ಕಿರಂಗೂರು ಸ್ವಾಮಿ, ಯಡದೊರೆ ಮಹದೇವಯ್ಯ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ, ಸಣ್ಣಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.