ಮೈಸೂರು: ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ವಿವಿಧ ಒಕ್ಕಲಿಗ ಸಂಘಟನೆಗಳ ವತಿಯಿಂದ ಮೇಣದಬತ್ತಿ ಮೆರವಣಿಗೆ ನಡೆಸಲಾಯಿತು.
ಅರಮನೆ ಮುಂಭಾಗದಿಂದ ಗಾಂಧಿ ವೃತ್ತದವರೆಗೆ ಕೈಯಲ್ಲಿ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದರು. ೨೦೧೨ರ ಅಕ್ಟೋಬರ್‌ನಲ್ಲಿ ಧರ್ಮಸ್ಥಳದ ನೇತ್ರಾವತಿ ಸಮೀಪದಲ್ಲಿ ಪ್ರಕರಣ ನಡೆದಿದೆ. ಈಗ ರಾಷ್ಟ್ರವ್ಯಾಪಿ ಸುದ್ದಿಯೂ ಆಗುತ್ತಿದೆ. ಪೊಲೀಸರು ಬಂಧಿಸಿದ್ದ ಪ್ರಕರಣದ ಆರೋಪಿ ಸಂತೋಷ್ ರಾಜ್ ಅಪರಾಧಿಯಲ್ಲ ಎಂದು ಸೌಜನ್ಯಳ ಪೋಷಕರು ಹೇಳುತ್ತಿದ್ದರೂ ಆತನನ್ನೇ ಕೇಂದ್ರಿಕರಿಸಿಕೊಂಡು ತನಿಖೆ ನಡೆಸಲಾಯಿತು. ಬಳಿಕ ನ್ಯಾಯಾಲಯ ಆತ ನಿಜವಾದ ಆರೋಪಿಯಲ್ಲ ಎಂದು ಹೇಳಿದೆ. ಹೀಗಿರುವಾಗ ನಿಜವಾದ ಆರೋಪಿಗಳು ಬೇರೆ ಯಾರೋ ಇರಲೇಬೇಕು. ಆದ್ದರಿಂದ ಮರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ಸತೀಶ್‌ಗೌಡ, ಗಂಗಾಧರಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ರಾಜ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.