ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ಚುನಾವಣೆ ರಾಜ್ಯ ಸರ್ಕಾರ ಸಿದ್ಧತೆಗಳನ್ನು ಆರಂಭಿಸಿದೆ. ಇದರಂತೆ ಹೊಸದಾಗಿ ರಚನೆಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಬಂಧಿಸಿದ ಅನುದಾನ ಹಂಚಿಕೆ ಕುರಿತು ಸಲಹೆಗಳು ಹಾಗೂ ಶಿಫಾರಸುಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ರಾಜ್ಯ ಹಣಕಾಸು ಆಯೋಗ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಈ ಕುರಿತು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರು ಮಾತನಾಡಿ, ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ, ಜಿಬಿಎ, ಅದರ ಐದು ನಗರ ಪಾಲಿಕೆಗಳು ಮತ್ತು 369 ವಾರ್ಡ್‌ಗಳಿಗೆ ಅನುದಾನ ಹಂಚಿಕೆಯ ಎಲ್ಲಾ ಅಂಶಗಳನ್ನು ಒಳಗೊಂಡ ಸಲಹೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು. ಅಲ್ಲದೆ ಆಯೋಗವು ಈಗಾಗಲೇ ನಗರದ ಐದು ಪಾಲಿಕೆಗಳಿಂದ ವಿವರವಾದ ಚರ್ಚೆಗಳನ್ನು ನಡೆಸಿದ್ದು, ಅವುಗಳನ್ನು ಪರಿಶೀಲಿಸಲು ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ಒಂದು ನಗರ ಪಾಲಿಕೆ ಸಂಗ್ರಹಿಸುವ ತೆರಿಗೆಯನ್ನು ಇನ್ನೊಂದಕ್ಕೆ ವರ್ಗಾಯಿಸುವ ವಿಧಾನವನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಬಳಿಕ ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲಾ ಮಾತನಾಡಿ, ರಸ್ತೆಗಳು, ಕೆರೆಗಳು, ಬೀದಿ ದೀಪಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಈ ಐದು ಪ್ರಮುಖ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ಹಾಗೂ ನಗರದ ಉದ್ಯಾನವನಗಳಲ್ಲಿ ಶೌಚಾಲಯಗಳು ಮತ್ತು ಗ್ರಂಥಾಲಯಗಳನ್ನು ನಿರ್ಮಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ತಿಳಿಸಿದರು.



