ಕೋಲಾರ : ಕೋಲಾರದ ಕೆಜಿಎಫ್ ನಗರದಲ್ಲಿ ಭಾರತ ಮೀಸಲು ಪಡೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಗೃಹ ಸಚಿವ ಪರಮೇಶ್ವರ್ ಅವರು ವೇದಿಕೆ ಕಾರ್ಯಕ್ರಮದಲ್ಲಿ ಅಬ್ಬರದ ಭಾಷಣ ಮಾಡಿದ್ದಾರೆ. ಇನ್ನೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಸಮರ್ಥ ಗೃಹ ಸಚಿವರು ಅಧಿಕಾರದಲ್ಲಿದ್ದಾರೆ ಎನ್ನುವ ವಿಪಕ್ಷಗಳ ಟೀಕೆಗೆ ಇದೀಗ ಪರಮೇಶ್ವರ್ ಖಡಕ್ ಉತ್ತರ ಕೊಟ್ಟಿದ್ದು, ಅಷ್ಟೇ ಅಲ್ಲದೇ ನಾನು ಸಾಫ್ಟ್, ನನಗೆ ಯಾಕೆ ಈ ಗೃಹ ಇಲಾಖೆ ಖಾತೆ ಕೊಡ್ತಾರೋ ಗೊತ್ತಿಲ್ಲ ಎನ್ನುವ ಅಚ್ಚರಿಯ ಹೇಳಿಕೆ ಸಹ ನೀಡಿದ್ದಾರೆ.
ಈ ವೇಳೆ ಕೋಲಾರದ ಕಾರ್ಯಕ್ರಮದಲ್ಲಿ ಜನರನ್ನ ಉದ್ದೇಶಿ ಮಾತಾಡಿದ ಗೃಹ ಸಚಿವ ಪರಮೇಶ್ವರ್ ಅವರು ಟೀಕೆ, ಟಿಪ್ಪಣಿಗಳಿಗೆ ಖಡಕ್ ಉತ್ತರ ನೀಡಿದ್ದು, ನಾನು ಮೃದು ಸ್ವಭಾವದವನು, ಹೇಳಿ ಕೇಳಿ ಮೆಲ್ಲಗೆ ಮಾತಾಡ್ತೀನಿ, ಆದ್ರೂ ನನಗೆ ಪೊಲೀಸ್ ಇಲಾಖೆ ಕೊಡ್ತಾರೆ. ಅದ್ಯಾಕೆ ಗೃಹ ಇಲಾಖೆ ಖಾತೆಯನ್ನ ನನಗೆ ಕೊಡ್ತಾರೊ ಗೊತ್ತಿಲ್ಲ ಎಂದಿದ್ದಾರೆ.
ನನಗೇ ಈ ಖಾತೆ ಕೊಟ್ರು 3 ಬಾರಿ ಕೂಡ ಗೃಹ ಸಚಿವನಾಗಿ ನನಗಿರುವ ಜ್ಞಾನದಿಂದ ಪೊಲೀಸ್ ಇಲಾಖೆಯನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನನ್ನು ಅಸಮರ್ಥ ಸಚಿವ ಎಂದು ಕರೆಯೋರಿಗೆ ಈ ಮೂಲಕ ಸಂದೇಶ ನೀಡುತ್ತಿದ್ದೇನೆ ಎಂದು ಗುಡುಗಿದ್ದಾರೆ.
ಅವನ್ಯಾರೋ ಗಂಧ-ಗಾಳಿ ಗೊತ್ತಿಲ್ಲದವನು, ಏನಾದರೂ ಒಂದು ಕೊಲೆಯಾದ್ರೆ ಪರಮೇಶ್ವರ್ ಅಸಮರ್ಥ ಅಂತಾರೆ. ಈ ಟೀಕೆ ಟಿಪ್ಪಣಿಗಳಿಗೆ ಜಗ್ಗೊ ನನ್ ಮಗ ನಾನಲ್ಲ ಎಂದು ಪರಮೇಶ್ವರ್ ಗುಡುಗಿದ್ದಾರೆ.
ಇನ್ನೂ ನಾನು ಮಂತ್ರಿ ಆದಮೇಲೆ ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಪೊಲೀಸರಿಗೆ 40 ಸಾವಿರ ಮನೆಗಳನ್ನು ಕಟ್ಟಿಕೊಟ್ಟಿದ್ದೇವೆ. 1.10 ಲಕ್ಷ ಸಾವಿರ ಪೊಲೀಸರಿಗೂ ಮನೆ ಕಟ್ಟಿಕೊಡುವ ಗುರಿ ಹೊಂದಿದ್ದೇನೆ ಎಂದರು. ಅಲ್ಲದೆ ಹಲವು ವರ್ಷದ ಹಿಂದೆ ಕೆಜಿಎಫ್ ಕ್ಲಬ್ ಸದಸ್ಯತ್ವ ಪಡೆದು ಲಂಡನ್ ಜಿಮ್ಕಾನಾಗೆ ತೆರುಳುವ ಪ್ರಯತ್ನ ಮಾಡಿದ್ದೆ. ಅದಕ್ಕಾಗಿ ನಾನು ಕೆಜಿಎಫ್ ಕ್ಲಬ್ ನಲ್ಲಿ, ಸದಸ್ಯತ್ವ ಪಡೆದುಕೊಂಡಿದ್ದೆ. ಆದರೆ ಸದಸ್ಯತ್ವ ಪಡೆದರು ಲಂಡನ್ನಿನ ಜಿಮ್ಕಾನಾ ಕ್ಲಬ್ ಹೋಗಲು ಆಸೆ ಈಡೇರಿಲ್ಲ ಎಂದು ಇದೇ ವೇಳೆ ಪರಮೇಶ್ವರ್ ಲಂಡನ್ ಕ್ಲಬ್ ಸೇರಿರುವ ಆಸೆ ಬಗ್ಗೆ ಮಾತನಾಡಿದ್ದಾರೆ.



