ಚಾಮರಾಜನಗರ: ಮಾರಕ ರೋಗಗಳ ವಿರುದ್ದ ರಕ್ಷಿಸಲು 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಲಸಿಕಾ ಕಾರ್ಯಕ್ರಮ ಮಿಷನ್ ಇಂದ್ರಧನುಷ್ ಅನ್ನು ಜಿಲ್ಲೆಯಲ್ಲಿ 3 ಸುತ್ತುಗಳಲ್ಲಿ ಹಮ್ಮಿಕೊಂಡಿದ್ದು ಇದರ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಇಲಾಖೆಗಳು ತೊಡಗಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದ, ಬಿಟ್ಟುಹೋದ, ವಂಚಿತರಾದ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದಡಿ ಲಸಿಕೆ ನೀಡಲಾಗುತ್ತದೆ. ವಿಶೇಷವಾಗಿ ದಡಾರ-ರುಬೆಲ್ಲಾ ರೋಗ ನಿರೋಧಕತೆಯ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಮಹತ್ತರ ಆರೋಗÀ್ಯ ಕಾರ್ಯಕ್ರಮ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಲಸಿಕಾ ಅಭಿಯಾನವು ಮೂರು ಸುತ್ತಿನಲ್ಲಿ ನಡೆಯಲಿದ್ದು ಮೊದಲನೇ ಸುತ್ತು ಆಗಸ್ಟ್ 7 ರಿಂದ 12ರವರೆಗೆ, ಎರಡನೇ ಸುತ್ತು ಸೆಪ್ಟೆಂಬರ್ 11 ರಿಂದ 16ರವರೆಗೆ, ಮೂರನೆಯ ಸುತ್ತು ಅಕ್ಟೊಬರ್ 9 ರಿಂದ 14 ರವೆರೆಗೆ ನಡೆಯಲಿದೆ. ವೇಳಾ ಪಟ್ಟಿ ಅನುಸಾರ ಲಸಿಕಾಕರಣಕ್ಕೆ ಸಜ್ಜಾಗಬೇಕು. ಸಮೀಕ್ಷೆಯಲ್ಲಿ ಗುರುತಿಸಲಾಗಿರುವ ಬಾಕಿ ಇರುವ ಎಲ್ಲರಿಗೂ ಲಸಿಕೆ ನೀಡಬೇಕು ಎಂದರು.
ಲಸಿಕಾ ಅಭಿಯಾನದಲ್ಲಿ ಲಸಿಕಾ ವಂಚಿತರಾಗಿರುವ, ಬಿಟ್ಟುಹೋಗಿರುವ ಪ್ರದೇಶ ಹಾಗೂ ಸಮುದಾಯಗಳನ್ನು ಗುರುತಿಸಿ ಅವರನ್ನು ತಲುಪುವ ಕಾರ್ಯದತ್ತ ಕೇಂದ್ರೀಕರಿಸಬೇಕು. ವಿಶೇಷವಾಗಿ ದಡಾರ-ರುಬೆಲ್ಲಾ ಲಸಿಕಾಕರಣ ಜೊತೆಗೆ ಇತ್ತೀಚೆಗೆ ಸೇರ್ಪಡೆಗೊಂಡ ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ಇಂದ್ರಧನುಷ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಉದ್ದೇಶ ಸಫಲತೆಗೆ ಇಲಾಖೆಗಳು ಕಾರ್ಯೋನ್ಮುಖವಾಗಬೇಕಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳ ಪಾತ್ರ ಅತ್ಯಂತ ಅವಶ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ತಾಯಂದಿರ ಸಭೆಗಳಲ್ಲಿ ಅಭಿಯಾನದ ಮಾಹಿತಿ ನೀಡಬೇಕು. 2 ರಿಂದ 5 ವರ್ಷದ ಮಕ್ಕಳು ಲಸಿಕೆ ಪಡೆದಿದ್ದಾರೆಯೇ ಎಂದು ಪರಿಶೀಲಿಸಬೇಕು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಇಲಾಖೆ ಶಾಲಾ ದಾಖಲಾತಿ ನೋಂದಣಿ ಸಮಯದಲ್ಲಿ ಲಸಿಕೆ ಪಡೆದಿರುವ ಬಗ್ಗೆ ಪರಿಶೀಲಿಸಿ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ಉತ್ತೇಜಿಸಬೇಕು. ಇತರೆ ಇಲಾಖೆಗಳು ಹಾಗೂ ಎನ್.ಜಿಒ ಗಳ ಸಹಕಾರ ಪಡೆದು ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಪ್ರಗತಿಯಾಗುವಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದ ಸಲಹೆಗಾರರಾದ ಡಾ. ಸುಧೀರ್ ನಾಯಕ್, ಆರ್.ಸಿ.ಎಚ್ ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಶೇಖರ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀನಿವಾಸ್, ಡಾ. ಗೋಪಾಲ್, ಡಾ. ಗಿರಿದಾಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ನಗರಸಭೆ ಆಯುಕ್ತರಾದ ಎಸ್.ವಿ. ರಾಮದಾಸ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.