ಮಾಗಡಿ : ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಇದೀಗ ಬಯಲಿಗೆ ಬಂದಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಯುವಕರ ಗುಂಪು ಈ ಕೃತ್ಯ ಎಸಗಿದ್ದು, ಯುವಕನ ಸಾವಿನ ರಹಸ್ಯ ತಡವಾಗಿ ಬಯಲಿಗೆ ಬಂದಿದೆ.
ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಹಾಗೂ ಬಂಧಿತರನ್ನು ಸುದೀಪ್, ಪ್ರಜ್ವಲ್ ಮೂವರು ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ.
ಜನವರಿ 1 ರ ಹೊಸ ವರ್ಷಾಚರಣೆಗಾಗಿ ಐವರು ಸ್ನೇಹಿತರು ಪಾರ್ಟಿ ಮಾಡಲು ತೀರ್ಮಾನಿಸಿದ್ದರು. ನಂತರ ಮದ್ಯಕ್ಕೆ ಎಳನೀರು ಬೆರೆಸುವ ಐಡಿಯಾ ಮಾಡಿದ ಸ್ನೇಹಿತರು ತೆಂಗಿನ ಮರ ಹತ್ತುವಂತೆ ವಿನೋದ್ ಕುಮಾರ್ ನನ್ನು ಒತ್ತಾಯ ಮಾಡಿದ್ದಾರೆ. ಸ್ನೇಹಿತರ ಒತ್ತಾಯಕ್ಕೆ ಮಣಿದ ವಿನೋದ್ ಕುಮಾರ್ ತೆಂಗಿನ ಮರ ಹತ್ತಿದ್ದಾರೆ. ಆದರೆ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದು ಬೆನ್ನುಮೂಳೆ ಮುರಿದುಕೊಂಡು ನೋವಿನಿಂದ ನರಳಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿಗಳು ನಮ್ಮ ಮೇಲೆ ಆರೋಪ ಬರಬಾರದು ಎಂದು ವಿನೋದ್ ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ ವಾಜರಹಳ್ಳಿ ಬಳಿ ಕರೆದುಕೊಂಡು ಹೋಗಿ ಕೆರೆಯಲ್ಲಿ ಮುಳುಗಿಸಿ ಕೊಂದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಲಕ್ಷಾಂತರ ಹಣ ಬೇಕು, ಇವೆಲ್ಲಾ ರಗಳೆ ಬೇಡ ಎಂದು ಸ್ನೇಹಿತನನ್ನೇ ಕೊಂದು ರಾಕ್ಷಸರಾಗಿ ವರ್ತಿಸಿದ್ದಾರೆ. ಸ್ನೇಹಿತನನ್ನು ಕೆರೆಗೆ ಎಸೆದು ಹೋದ ಆರೋಪಿಗಳು ಮತ್ತೆ ಸಂಜೆ ಬಂದು ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ.
ಮಗ ನಾಪತ್ತೆಯಾಗಿರುವ ಹಿನ್ನೆಲೆ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಸುದೀಪ್ ಹಾಗೂ ಪ್ರಜ್ವಲ್ ನನ್ನು ಪೊಲೀಸರು ಬಂಧಿಸಿದ್ದಾರೆ.



