ಬೆಂಗಳೂರು : ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದ್ದರೂ, ಬೆಂಗಳೂರಿನಲ್ಲಿ ಆಡಲು ಆರ್‌ಸಿಬಿ ಫ್ರಾಂಚೈಸಿಯು ಮನಸ್ಸು ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮನವಿಯನ್ನು ಆರ್‌ಸಿಬಿ ತಿರಸ್ಕರಿಸಿದೆ. ಸರ್ಕಾರದೊಂದಿಗಿನ ಸಮಸ್ಯೆಗಳಿಂದಾಗಿ ಬೇರೆ ನಗರದಲ್ಲಿ ಆಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನೂ ಈ ಕುರಿತು ಬುಧವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ ಈ ಮಾಹಿತಿ ನೀಡಿದ್ದಾರೆ. ಮುಂದುವರೆದು ಸರ್ಕಾರದಿಂದ ನಾವು ಷರತ್ತುಬದ್ಧ ಅನುಮತಿ ಪಡೆದಿದ್ದೇವೆ. ಆದರೆ ಇಲ್ಲಿ ಆಡಬೇಕೇ, ಬೇಡವೇ ಎಂಬುದು ಆರ್‌ಸಿಬಿಗೆ ಬಿಟ್ಟಿದ್ದು. ಆರ್‌ಸಿಬಿ ಎಲ್ಲಾ 7 ಪಂದ್ಯ ಇಲ್ಲೇ ಆಡಬೇಕೆಂಬುದು ನಮ್ಮ ಕಳಕಳಿಯ ಮನವಿ. ಕ್ರಿಕೆಟ್‌ಗಾಗಿ ನಾವು ಎಲ್ಲವನ್ನೂ ಮಾಡಿದ್ದೇವೆ. ಈಗ ಅಭಿಮಾನಿಗಳಿಗಾಗಿ ಆರ್‌ಸಿಬಿ ಇಲ್ಲಿ ಬಂದು ಆಡಬೇಕು ಎಂದು ವೆಂಕಟೇಶ್ ಮನವಿ ಮಾಡಿದರು.
ಚಿನ್ನಸ್ವಾಮಿಗೆ ಬಂದು ಆಡುವುದು ಮತ್ತು ಬೇರೆ ನಗರಕ್ಕೆ ಹೋಗದೇ ಇರುವುದು ಆರ್‌ಸಿಬಿಯ ಕರ್ತವ್ಯ. 17 ವರ್ಷದಲ್ಲಿ ಇಲ್ಲಿ ಗಳಿಸಿದ ನಿಷ್ಠಾವಂತ ಅಭಿಮಾನಿಗಳು ಬೇರೆಲ್ಲೂ ಸಿಗುವುದಿಲ್ಲ. ಬೇರೆ ಕಡೆ ಆಡಿದರೆ ಇಲ್ಲಿನಂತೆ ಪ್ರೇಕ್ಷಕರೂ ಸೇರುವುದಿಲ್ಲ ಎಂದು ವೆಂಕಟೇಶ್ ಹೇಳಿದರು.
ಇನ್ನೂ ಆರ್‌ಸಿಬಿಗೆ ಸಮಸ್ಯೆ ಇರುವುದು ಸರ್ಕಾರದ ಜೊತೆಗೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದ್ದು, ಆರ್‌ಸಿಬಿ ಬೆಂಗಳೂರಿನಲ್ಲಿ ಆಡಲು ಉತ್ಸುಕವಾಗಿದೆ. ಆದರೆ ಫ್ರಾಂಚೈಸಿಗೆ ಕೆಲ ಆತಂಕಗಳಿವೆ. ಅವುಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಲಿದ್ದಾರೆ. ಬಳಿಕ ನಾವು ಒಟ್ಟಿಗೆ ಕುಳಿತು ಪರಿಹರಿಸುತ್ತೇವೆ ಎಂದಿದ್ದಾರೆ.
ಮೂಲಗಳ ಪ್ರಕಾರ, ಕ್ರೀಡಾಂಗಣಕ್ಕೆ ಸಂಬಂಧಿಸಿದ ವ್ಯವಸ್ಥೆಗಳಿಗೆ ಮಾತ್ರವಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಿನ ರಸ್ತೆಯ ಜವಾಬ್ದಾರಿಯನ್ನು ಆರ್‌ಸಿಬಿ ವಹಿಸಿಕೊಳ್ಳುವಂತೆ ಕೇಳಲಾಗಿದೆ. ಜೊತೆಗೆ ಹೆಚ್ಚುವರಿ ಅನುಸರಣಾ ಕ್ರಮಗಳನ್ನೂ ಸಹ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಡಿಜೆ ಬಳಕೆಯ ಮೇಲಿನ ನಿರ್ಬಂಧಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಗ್ನಿಶಾಮಕ ದಳದ ಘಟಕವನ್ನು ಸ್ಥಾಪಿಸುವ ನಿಬಂಧನೆಗಳು ಸೇರಿವೆ ಎನ್ನಲಾಗಿದೆ.
ಜ. 27ರೊಳಗೆ ಅಂತಿಮ ನಿರ್ಧಾರಕ್ಕೆ ಬನ್ನ; ಬಿಸಿಸಿಐ
ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬರುವ ಐಪಿಎಲ್ 2026 ಗಾಗಿ ತಮ್ಮ ಆತಿಥೇಯ ಆಡುವ ನಗರಗಳ ಬಗ್ಗೆ ಜನವರಿ 27 ರೊಳಗೆ ಅಂತಿಮ ನಿರ್ಧಾರವನ್ನು ತಿಳಿಸಬೇಕೆಂದು ಬಿಸಿಸಿಐ ಸೂಚಿಸಿದೆ.



