ತುಮಕೂರು: ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆ, ಭಾಷಣದ ಪ್ರತಿಯನ್ನು ಪೂರ್ಣವಾಗಿ ಓದದೆ ಸದನದಿಂದ ಹೊರನಡೆದಿದ್ದು ತೀವ್ರ ಚರ್ಚೆಗೀಡಾಗಿತ್ತು. ಇದು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಮುನಿಸು ಮುಂದುವರಿದಿದೆ ಎಂಬ ಸಂದೇಶ ರವಾನಿಸಿತ್ತು.
ಆದರೆ, ಸಂಜೆ ತುಮಕೂರಿನಲ್ಲಿ ನಡೆದ ದೃಶ್ಯವೇ ಬೇರೆಯಾಗಿತ್ತು. ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಾಜ್ಯಪಾಲರು, ರಾಜ್ಯ ಸರ್ಕಾರದ ಕ್ರೀಡಾ ನೀತಿ ಮತ್ತು ಆಯೋಜನೆಯ ಬಗ್ಗೆ ಮೆಚ್ಚುಗೆಯ ಸುರಿಮಳೆಗರೆದರು.
ಮುಂದುವರೆದು ಕರ್ನಾಟಕ ಸರ್ಕಾರ ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿದೆ. ಇಂತಹ ಅದ್ಭುತ ಕ್ರೀಡಾಕೂಟ ಆಯೋಜಿಸಿದ್ದಕ್ಕಾಗಿ ನಾನು ಸರ್ಕಾರಕ್ಕೆ ಧನ್ಯವಾದ ಮತ್ತು ಶುಭಾಶಯ ತಿಳಿಸುತ್ತೇನೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಸಮ್ಮುಖದಲ್ಲೇ ನಡೆದ ಈ ಭಾಷಣವು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಕ್ರೀಡಾಕೂಟವು ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದಕ್ಕೆ ಅಧಿಕಾರಿಗಳು ಮತ್ತು ಸರ್ಕಾರವನ್ನು ರಾಜ್ಯಪಾಲರು ಅಭಿನಂದಿಸಿದರಲ್ಲದೆ, ಕರ್ನಾಟಕವು ಮೊದಲಿನಿಂದಲೂ ಜ್ಞಾನ ಮತ್ತು ಕ್ರೀಡೆಯ ಬಂಡಾರವಾಗಿದೆ. ಕ್ರೀಡಾಪಟುಗಳು ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಇನ್ನೂ ಬೆಳಗ್ಗೆ ಸರ್ಕಾರದ ಮೇಲೆ ಅಸಮಾಧಾನ ಹೊಂದಿರುವಂತೆ ಕಂಡ ರಾಜ್ಯಪಾಲರು, ಸಂಜೆ ವೇಳೆಗೆ ಸರ್ಕಾರದ ಕಾರ್ಯಕ್ರಮವನ್ನು ಹೊಗಳಿರುವುದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಆನೆಬಲ ತಂದಂತಿದೆ. ಅದೇ ಸಮಯದಲ್ಲಿ, ರಾಜ್ಯಪಾಲರ ಅಸಮಾಧಾನವನ್ನೇ ಅಸ್ತ್ರವಾಗಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಪ್ರತಿಪಕ್ಷಗಳಿಗೆ ಇದು ದೊಡ್ಡ ಮುಜುಗರ ತಂದಿದೆ ಎನ್ನಲಾಗುತ್ತಿದೆ.



