Sunday, January 25, 2026
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರದ ಹಳೇ ಎಡತೊರೆಯಲ್ಲಿ ಅರ್ಕೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ಕೆ.ಆರ್.ನಗರದ ಹಳೇ ಎಡತೊರೆಯಲ್ಲಿ ಅರ್ಕೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ವರದಿ : ಕುಪ್ಪೆಮಹದೇವಸ್ವಾಮಿ.

ಕೆ.ಆರ್.ನಗರ: ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಹೊರ ವಲಯದಲ್ಲಿರುವ ಹಳೇ ಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಭಾನುವಾರ ಅತ್ಯಂತ‌ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಹಿನ್ನಲೆಯಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ರುದ್ರಾಭಿಷೇಕ, ಸೂರ್ಯಮಂಡಲೋತ್ಸವ, ಅರ್ಕಮುಡಿ ಮುಕುಟಧಾರಣೆ ಮಾಡಲಾಯಿತಲ್ಲದೆ ಆನಂತರ ಚೀರ್ನಹಳ್ಳಿ, ಕಂಠೇನಹಳ್ಳಿ ಮತ್ತು ಮೂಡಲಕೊಪ್ಪಲು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಯಾತ್ರದಾನೋತ್ಸವ ತದನಂತರ ಸೇವೆ ಸಲ್ಲಿಸಿದರು.

ಬೆಳಗ್ಗೆ 11.10 ದೇವಾಲಯದ ಪ್ರಾಂಗಣದಿಂದ ಉತ್ಸವ ಮೂರ್ತಿಗಳನ್ನು ಮಂಗಳ ವಾದ್ಯ ಸಮೇತ ಮೆರವಣಿಗೆಯಲ್ಲಿ ಕರೆತಂದು ಪ್ರತಿಷ್ಠಾಪನೆ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಆನಂತರ ನೆರೆದಿದ್ದ ಸಾವಿರಾರು ಭಕ್ತರು ದೇವರಿಗೆ ಜಯಘೋಷಗಳನ್ನು ಮೊಳಗಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆದು ದೇವಾಲಯದ ಸುತ್ತ ರಥವನ್ನು ಒಂದು‌ ಸುತ್ತು ಎಳೆದರು.

ರಥಸಪ್ತಮಿ ದಿನದಂದು‌ ನಡೆದ ರಥೋತ್ಸವ ಮತ್ತು ಜಾತ್ರೆಗೆ ಕೆ.ಆರ್.ನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಆಗಮಿಸಿ ಕಾವೇರಿ ನದಿಯಲ್ಲಿ ಮಿಂದು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಸಮರ್ಪಿಸಿ ಹರಕೆ ತೀರಿಸಿದರು.
ಜಾತ್ರೆಯ ಅಂಗವಾಗಿ ದೇವಾಲಯದ ಸುತ್ತಮುತ್ತ ಮತ್ತು ಸಂಪರ್ಕ ರಸ್ತೆಯಲ್ಲಿ ತಲೆ ಎತ್ತಿದ್ದ ಸಿಹಿತಿಂಡಿ, ವಿವಿದ ಆಟಿಕೆ, ಮನರಂಜನಾ ಆಟಗಳ ಅಂಗಡಿಗಳು ಮತ್ತು ಇತರ ವಸ್ತುಗಳ ಮಾರಾಟ ಸ್ಥಳಗಳು ಎಲ್ಲರ ಗಮನ ಸೆಳೆದವಲ್ಲದೆ ವರ್ತಕರು ಭರ್ಜರಿ ವ್ಯಾಪಾರ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷರಾದ ಶಿವುನಾಯಕ್, ಕೋಳಿಪ್ರಕಾಶ್, ಮಾಜಿ ಸದಸ್ಯರಾದ ನಟರಾಜು, ಕೆ.ವಿನಯ್, ಕೆ.ಎಲ್.ಜಗದೀಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೆಚ್.ಪಿ.ಪ್ರಶಾಂತ್, ಎಸ್. ಸಿದ್ದೇಗೌಡ, ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular