Sunday, January 25, 2026
Google search engine

Homeರಾಜ್ಯಸುದ್ದಿಜಾಲಪ್ರತಿಯೊಂದು ಮತಕ್ಕೂ ತನ್ನದೇ ಆದ ಒಂದು ಮಹತ್ವವಿದೆ- ಸುಬ್ರಹ್ಮಣ್ಯ ಜೆ.ಎನ್

ಪ್ರತಿಯೊಂದು ಮತಕ್ಕೂ ತನ್ನದೇ ಆದ ಒಂದು ಮಹತ್ವವಿದೆ- ಸುಬ್ರಹ್ಮಣ್ಯ ಜೆ.ಎನ್

ಮಂಡ್ಯ: ಪ್ರತಿಯೊಂದು ಮತಕ್ಕೂ ತನ್ನದೇ ಆದ ಒಂದು ಮಹತ್ವವಿದೆ ಹಾಗಾಗಿ ಮತದಾರರು ಚುನಾವಣೆ ನಡೆಯುವ ದಿನಾಂಕದಂದು ತಪ್ಪದೆ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸುಬ್ರಹ್ಮಣ್ಯ ಜೆ.ಎನ್ ಅವರು ಹೇಳಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 1950 ಜನವರಿ 25 ರಂದು ಚುನಾವಣೆ ಆಯೋಗವನ್ನು ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಗ್ರಾಮ ಪಂಚಾಯಿತಿಯಿಂದ ಲೋಕಸಭಾ ಚುನಾವಣೆಯವರೆಗೆ 200 ಕ್ಕೂ ಹೆಚ್ಚು ಚುನಾವಣೆಗಳನ್ನು ಯಶಸ್ವಿಯಾಗಿ ಚುನಾವಣೆ ಆಯೋಗ ನಡೆಸಿದೆ. 1985 ರಲ್ಲಿ ಚುನಾವಣೆಯಲ್ಲಿ ಭಾಗವಹಿಸಲು ಇರಬೇಕಾದ ಕನಿಷ್ಠ ವಯೋಮಿತಿಯನ್ನು 21 ರಿಂದ 18 ವರ್ಷಕ್ಕೆ ತರಲಾಯಿತು. ಇದೆ ಕಾರಣದಿಂದ ಅಂದಿನ ಕಾಲದಲ್ಲಿ ಶೇ 20 ರಷ್ಟು ಮತದಾನ ಹೆಚ್ಚಾಯಿತು ಎಂದು ಹೇಳಿದರು.

ಇತ್ತೀಚಿಗಷ್ಟೇ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಒಬ್ಬ ಚುನಾವಣೆ ಪ್ರತಿನಿಧಿ ಗೆಲುವು ಸಾಧಿಸಿದ್ದಾರೆ. ಇದರ ಅರ್ಥ ಮತದಾನ ಮಹತ್ವ ಎಷ್ಟಿದೆ ಎಂಬುದಾಗಿದೆ. ಮತದಾನದ ದಿನದಂದು ಎಲ್ಲರಿಗೂ ಸಾರ್ವಜನಿಕ ರಜೆ ಇರುತ್ತದೆ. ನೌಕರಿಯಲ್ಲಿ ಇದ್ದವರಿಗೆ ಮತದಾನದ ಹಿಂದಿನ ದಿವಸ ಅಥವಾ ಮರು ದಿವಸ ರಜೆ ನೀಡಬೇಕು ಸರ್ಕಾರದ ಸುತ್ತೋಲೆ ಇದೆ. ಮತದಾರರು ತಮ್ಮ ಊರುಗಳಿಗೆ ತೆರಳಿ ತಪ್ಪದೆ ತಮ್ಮ ಮತವನ್ನು ಚಲಾಯಿಸಬೇಕು ಎಂದು ಹೇಳಿದರು.

ಚುನಾವಣೆಗೆ ಮೂರು ಮುಕ್ಕಾಲು ತಿಂಗಳ ಇರುವ ಕಾಲದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಕರಿಗೆ ವಿಶೇಷ ಅಧಿಕಾರ ಇರುತ್ತದೆ. ಮೂರು ಇಲಾಖೆಯವರು ಶ್ರಮವಹಿಸಿ ಚುನಾವಣೆಯಲ್ಲಿ ಭ್ರಷ್ಟಾಚಾರ ವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮತದಾನದ ಮಹತ್ವ ಅರಿತ ಮತದಾರರು ಇತರರಿಗೆ ಪ್ರಧಾನದ ಕುರಿತು ಅರಿವು ಮೂಡಿಸಬೇಕು. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಒಬ್ಬ ಜವಾಬ್ದಾರಿಯುತ ಮತದಾರನ ಮೇಲೆ ಇರುತ್ತದೆ. ಮತದಾನ ದಿನದಂದು ದೇಶವನ್ನು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಭಾರತ ಒಂದು ಪ್ರಜಾಪ್ರಭುತ್ವ ದೇಶ, ಪ್ರೆಜೆಗಳೆ ಭಾರತದಲ್ಲಿ ಪ್ರಭುಗಳು. ದೇಶ ಚೆನ್ನಾಗಿ ಇರಬೇಕಾದರೆ ಸೂಕ್ತ ನಾಯಕರನ್ನು ಆಯ್ಕೆ ಮಾಡುವುದು ಮುಖ್ಯ. ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ, ಹೊಣೆಗಾರಿಕೆ ಮತ್ತು ಕರ್ತವ್ಯ ಪ್ರಜೆಗಳ ಮೇಲಿದೆ. ನಮ್ಮ ಆಳುವ ನಾಯಕರು ಸರಿ ಇರಬೇಕು ಎಂದರೆ ಪ್ರಜೆಗಳು ಸರಿ ಇರಬೇಕು ಎಂದು ತಿಳಿಸಿದರು.

ಮತದಾರರಿಗೆ ನಾಯಕರನ್ನು ಆಯ್ಕೆ ಮಾಡುವಾಗ ನೈತಿಕ ಚಿಂತನೆ ಇಟ್ಟುಕೊಂಡು ಪ್ರಜ್ಞಾವಂತಿಕೆಯಿಂದ ಆಯ್ಕೆ ಮಾಡಬೇಕು. 1950 ರಲ್ಲಿ ಸಂವಿಧಾನಾತ್ಮಕವಾಗಿ ರಚನೆಗೊಂಡ ಚುನಾವಣಾ ಆಯೋಗದ ನೆನಪಿಗಾಗಿ ಪ್ರತಿವರ್ಷ ಮತದಾರ ದಿನಾಚರಣೆಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದರ ಉದ್ದೇಶ ಪ್ರತಿಯೊಬ್ಬ ಮತದಾರರು ಕೂಡ ಪ್ರಜಾಸತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಪ್ರತಿಯೊಬ್ಬ ಮತದಾರರಿಗೂ ಮತದಾನದ ಮಹತ್ವ ತಿಳಿಸುವುದು, ಯಾವುದೇ ಮತದಾರರು ಮತದಾನ ದಿಂದ ಹಿಂದೂಳಿಯ ಬಾರದು ಎಂಬುದಾಗಿದೆ ಎಂದು ಹೇಳಿದರು.

18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಬೇಕು. ಪ್ರತಿ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಇಂದು ಕರೆಯಲಾಗುತ್ತದೆ. ಮನೆಯಲ್ಲಿ ಆಚರಿಸುವ ಹಬ್ಬದಂತೆ ಚುನಾವಣೆಯನ್ನು ಆಚರಿಸಬೇಕು. ನೈತಿಕ ಮೌಲ್ಯ ಮತ್ತು ಇಟ್ಟುಕೊಂಡು ಪ್ರಜ್ಞಾವಂತಿಕೆಯಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದರು.

ಸದರಿ ವರ್ಷ ಮತದಾರ ದಿನಾಚರಣೆಯನ್ನು “ನನ್ನ ಭಾರತ ನನ್ನ ಮತದಾನ” ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ವರ್ಷಕ್ಕೆ ನಾಲ್ಕು ಬಾರಿ ಮನೆಮನೆಗೆ ಹೋಗಿ 18 ವರ್ಷ ತುಂಬಿದವರನ್ನು ಮತದಾನ ಪಟ್ಟಿಯಲ್ಲಿ ಸೇರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ದೇಶದ ಯುವ ಜನತೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರದ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ಮಾಡಿರುವ ಜಿಲ್ಲೆಗಳಲ್ಲಿ ಮಂಡ್ಯ ಶೇ 81.61 ಮತದಾನ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ಭಾರತೀಯ ಸಂವಿಧಾನದಲ್ಲಿ ಭಾಗ ಮೂರು ಮತ್ತು ಭಾಗ ನಾಲ್ಕು ಇದೆ. ಭಾಗ ಮೂರು ಪ್ರತಿಯೊಬ್ಬ ಭಾರತೀಯರಿಗೂ ಸಂವಿಧಾನಿಕ ಹಕ್ಕುಗಳನ್ನು ನೀಡಿದೆ. ಭಾಗ ನಾಲ್ಕು ಸಂವಿಧಾನಿಕ ಕರ್ತವ್ಯದ ಕುರಿತು ತಿಳಿಸುತ್ತದೆ. ಸಂವಿಧಾನಿಕ ಕರ್ತವ್ಯಗಳಲ್ಲಿ ಮತದಾನವೂ ಒಂದಾಗಿದೆ. ಮತದಾನ ಮಾಡುವ ಸಂದರ್ಭದಲ್ಲಿ ಜಾತಿ ಧರ್ಮ ಮತ್ತು ಲಿಂಗಗಳ ಭೇದ ತೊರೆದು ನಾನು ಭಾರತೀಯ ಜಾಗೃತ ಮತದಾರ ಎಂಬ ಭಾವನೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.

ಇವತ್ತಿಗೂ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಗ್ರಾಮದಿಂದ ರಾಷ್ಟ್ರದ ವರೆಗೂ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ದೇಶ ಭಾರತವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರು ಮೀಸಲಾತಿ ಬರುವುದರಲ್ಲಿದೆ. ಮಹಿಳೆಯರು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಚುನಾವಣೆಯ ಮಹತ್ವವನ್ನು ತಿಳಿಯಬೇಕು. ಭಾರತದ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಚುನಾವಣೆಯಲ್ಲಿ ಮಹಿಳೆಯ ಪ್ರಾತಿನಿಧ್ಯ ವಹಿಸಬೇಕು ಎಂದು ಹೇಳಿದರು.

ನಂತರ ಬೂತ್ ಮಟ್ಟದ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸುಬ್ರಹ್ಮಣ್ಯ ಜಿ.ಎನ್ ಅವರು ಸಭಿಕರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ ಜೆ, ಉಪವಿಭಾಗಾಧಿಕಾರಿ ಶಿವಮೂರ್ತಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಯ್ಯ, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಗ್ರೇಡ್ -2 ಲಕ್ಷ್ಮೀ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್ ರವಿಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮತದಾನ ಜಾಗೃತಿ ಜಾಥಾ
2026 ನೇ ಸಾಲಿನ ರಾಷ್ಟ್ರೀಯ ಮತದಾರ ದಿನಾಚರಣೆಯ ಅಂಗವಾಗಿ ಅರಿವು ಮೂಡಿಸಲು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸುಬ್ರಹ್ಮಣ್ಯ ಜೆ.ಎನ್ ಅವರು ಹಸಿರು ಬಾವುಟ ಪ್ರದರ್ಶಿಸಿವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

RELATED ARTICLES
- Advertisment -
Google search engine

Most Popular