ಮಂಡ್ಯ: ಕನ್ನಡ ಜ್ಞಾನ ದಾಸೋಹಿ, ವಿಶಿಷ್ಟ ಪುಸ್ತಕ ಭಂಡಾರವನ್ನು ನಿರ್ಮಿಸಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದವರಾದ ಅಂಕೇಗೌಡರು, ತಮ್ಮ ಜೀವನವನ್ನೇ ಪುಸ್ತಕಗಳಿಗೆ ಸಮರ್ಪಿಸಿ ಗ್ರಾಮೀಣ ಪ್ರದೇಶದಲ್ಲೇ ಅಪರೂಪದ ಜ್ಞಾನ ಕೇಂದ್ರವನ್ನು ರೂಪಿಸಿದ್ದಾರೆ.
ಪಾಂಡವಪುರದಿಂದ ಕೇವಲ ಒಂದು ಕಿಲೋಮೀಟರ್ ದೂರದ ಹರಳಹಳ್ಳಿಯಲ್ಲಿ ಅವರು ನಿರ್ಮಿಸಿರುವ ‘ಪುಸ್ತಕ ಮನೆ’ಯಲ್ಲಿ ಲಕ್ಷಗಟ್ಟಲೆ ಪುಸ್ತಕಗಳ ಸಂಗ್ರಹವಿದೆ. ವಿಶ್ವದ ಅನೇಕ ಪ್ರಮುಖ ಗ್ರಂಥಗಳು ಒಂದೇ ಸೂರಿನಡಿ ಓದಲು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾರೇ ಬಂದರೂ ಯಾವುದೇ ವಿಷಯದ ಪುಸ್ತಕಗಳನ್ನು ಉಚಿತವಾಗಿ ಓದಿ ಜ್ಞಾನ ಸಂಪಾದಿಸಬಹುದು ಎಂಬುದು ಈ ಗ್ರಂಥಾಲಯದ ವಿಶೇಷತೆ.
ಅಂಕೇಗೌಡರ ಪುಸ್ತಕ ಪ್ರೀತಿಗೆ ಬೀಜ ಬಿತ್ತಿದ್ದು ಅವರ ಶಾಲಾ ದಿನಗಳೇ. ಶಾಲಾ ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ಇಲ್ಲದಿದ್ದ ಕಾರಣ, ಸ್ವಂತವಾಗಿ ಪುಸ್ತಕಗಳನ್ನು ಖರೀದಿಸಿ ಸಂಗ್ರಹಿಸುವ ಹವ್ಯಾಸ ಬೆಳೆದಿತು. ಆ ಹವ್ಯಾಸವೇ ಇಂದು ವಿಶ್ವದ ದೊಡ್ಡ ಖಾಸಗಿ ಗ್ರಂಥಾಲಯಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.
ಈ ಪುಸ್ತಕ ಮನೆ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ಆರಂಭದಲ್ಲಿ ಸಣ್ಣ ಕಟ್ಟಡದಲ್ಲಿ ಆರಂಭವಾದ ಈ ಪ್ರಯತ್ನಕ್ಕೆ ನಂತರ ಉದ್ಯಮಿ ಹರಿಕೋಡೆ ನಿರ್ಮಿಸಿ ಕೊಟ್ಟ ಕಟ್ಟಡ ಹೊಸ ರೂಪ ನೀಡಿದೆ. ಈ ಸಾಧನೆಯಲ್ಲಿ ಅಂಕೇಗೌಡರ ಪತ್ನಿಯ ಸಹಕಾರವೂ ಮಹತ್ವದ ಪಾತ್ರ ವಹಿಸಿದೆ.
ಗ್ರಾಮೀಣ ಭಾಗದಲ್ಲಿ ಜ್ಞಾನ ದಾಸೋಹಿಯಾಗಿ ಬೆಳಗಿದ ಅಂಕೇಗೌಡರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.



