Monday, January 26, 2026
Google search engine

Homeರಾಜಕೀಯನಾಡಿನ ಜನತೆಗೆ ನಾವು ಸೇವೆ ಮಾಡುವುದು, ಕುಟುಂಬಕ್ಕಲ್ಲ : ಡಿ.ಕೆ.ಶಿವಕುಮಾರ್

ನಾಡಿನ ಜನತೆಗೆ ನಾವು ಸೇವೆ ಮಾಡುವುದು, ಕುಟುಂಬಕ್ಕಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ಶಾಲೆಗಳಲ್ಲಿ ಮಕ್ಕಳಿಗೆ, ಸರ್ಕಾರಿ ಕಚೇರಿಗಳಲ್ಲಿ ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಮುಂದಿನ ಪೀಳಿಗೆಗೆ ಕೂಡ ಉಳಿಸಿ ಬೆಳೆಸಿಕೊಂಡು ಹೋಗಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್‌ ಅವರು ಇವತ್ತು ಪ್ರತಿ ಹಂತದಲ್ಲಿ ಸಂವಿಧಾನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರದಿಂದ ಗ್ರಾಮೀಣ ಬಡವರ ಉದ್ಯೋಗ ಖಾತ್ರಿ ಯೋಜನೆಗೆ ತೊಂದರೆಯಾಗಿರುವುದು ನಮಗೆಲ್ಲಾ ಅಚ್ಚರಿ ತಂದಿದೆ ಎಂದಿದ್ದಾರೆ.

ಇದರ ವಿರುದ್ಧ ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದ್ದು, ನಾಳೆ ಬೆಳಗ್ಗೆ ರಾಜಭವನಕ್ಕೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಂತರ ಪ್ರತಿ ತಾಲೂಕಿನಲ್ಲಿ 5 ಕಿಲೋ ಮೀಟರ್ ಉದ್ದ ಪಾದಯಾತ್ರೆ ಹಮ್ಮಿಕೊಂಡು ಪ್ರತಿ ಪಂಚಾಯತಿಯಲ್ಲಿ ಹೋರಾಟ ಮಾಡುತ್ತೇವೆ, ಇದಕ್ಕೆ ಪ್ರಜಾ ಪ್ರತಿನಿಧಿಗಳಿಗೆ, ಪಂಚಾಯತ್ ಸದಸ್ಯರಿಗೆ ಮತ್ತು ಮುಖಂಡರುಗಳಿಗೆ ನಿರ್ದೇಶನ ನೀಡಿದ್ದೇವೆ ಎಂದು ತಿಳಿಸಿದರು.

ವಿಧಾನ ಸೌಧದಲ್ಲಿ ನಿರ್ಣಯ: ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ನಮ್ಮ ಸರ್ಕಾರ ಚರ್ಚೆ ಮಾಡಿ ನಿರ್ಣಯ ಹೊರಡಿಸುತ್ತೇವೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡುತ್ತೇವೆ ಮತ್ತು ನಿರ್ಣಯವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.

ಬಿಜೆಪಿ, ಜೆಡಿಎಸ್ ಕೇಂದ್ರದ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸುತ್ತಿಲ್ಲವಲ್ಲಾ ಎಂದು ಪತ್ರಕರ್ತರು ಕೇಳಿದಾಗ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಶಾಸಕನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳದೆ ಈ ತೀರ್ಮಾನ ಮಾಡಿದ್ದಾರೆ. ಇದಕ್ಕೆ ಹಣ ಒದಗಿಸಿಕೊಡುವವರು ಯಾರು, ಅವರು ಹೊಸ ಮಸೂದೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಅದಕ್ಕೆ ಹಣವನ್ನು ಯಾರು ಒದಗಿಸುತ್ತಾರೆ? ಯಾವುದೇ ರಾಜ್ಯವು ಅನುದಾನವನ್ನು ನೀಡಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಚರ್ಚೆಯ ಸಮಯದಲ್ಲಿ ನಾವು ಎಲ್ಲಾ ವಿಷಯಗಳಿಗೆ ಉತ್ತರಿಸಲು ಸಿದ್ಧರಿದ್ದೇವೆ ಎಂದರು.

ಕೆಲವು ನಾಯಕರು ಕೇಂದ್ರ ಸರ್ಕಾರದ ಹೊಸ ಕಾಯ್ದೆ ಬಗ್ಗೆ ಚರ್ಚೆಗೆ ಬರುತ್ತೇವೆ ಎಂದು ಹೇಳಿದ್ದಾರೆ, ಚರ್ಚೆಗೆ ಬರಲಿ, ನಾವು ಅಸೆಂಬ್ಲಿಯಲ್ಲಿ ಉತ್ತರ ಕೊಡುತ್ತೇವೆ ಎಂದರು.

2028ರಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ತಮ್ಮ ತಂದೆಗೋಸ್ಕರ ಮುಖ್ಯಮಂತ್ರಿ ಯಾಗುತ್ತಾರೆ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ ಇಂದು ಶುಭ ದಿನ ಯಾಕೆ ಅಶುಭ ಮಾತು ಆಡುವುದು. ನಾಡಿನ ಜನತೆಗೆ ನಾವು ಸೇವೆ ಮಾಡುವುದು, ಕುಟುಂಬಕ್ಕಲ್ಲ, ಅವರು ಅವರ ಕುಟುಂಬದ ಆಸೆ, ಭಾವನೆಗಳಿಗೆ ತೊಂದರೆಯಲ್ಲಿರುವವರ ಬಗ್ಗೆ ಮಾತನಾಡುತ್ತಾರೆ, ಇದುವೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.

ಇನ್ನೂ ಈ ಸಂದರ್ಭದಲ್ಲಿ ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಜೆಡಿಎಸ್ ನಾಯಕರಿಗೆ ಶಕ್ತಿ, ಜೀವ ಬರುವುದಿಲ್ಲ. ಧೈರ್ಯ ಬರುವುದಿಲ್ಲ ಎಂದರು. ದೇಶದಲ್ಲಿರುವ ಕಾನೂನು ಎಲ್ಲಾ ಒಂದೇ, ಈ ಕಾನೂನು ಪ್ರಕಾರ ಏನು ಮಾಡಿದ್ದೇವೆ ಎಂದು ನೀವೇ ಉತ್ತರ ನೀಡಬೇಕೆಂದು ಹಾಸನ ಸಮಾವೇಶದಲ್ಲಿ ರೇವಣ್ಣ ಕುಟುಂಬ ಬಂಧನ ಬಗ್ಗೆ ಮಾತನಾಡಿದ ಹೆಚ್.ಡಿ.ದೇವೇಗೌಡರಿಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular