ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತೆಗೆದುಕೊಂಡ ನಿರ್ಧಾರದಿಂದ ನಾವೆಲ್ಲ ನಿರ್ಭೀತರಾಗಿದ್ದೇವೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಹೇಳಿದರು.
ಈ ಕುರಿತು 77ನೇ ಗಣರಾಜ್ಯೋತ್ಸವದ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಎಲ್ಲರೂ ಭಯವಿಲ್ಲದೇ ಬದುಕುತ್ತಿದ್ದೇವೆ. ಆದರೆ ನಮಗೆ ಬಾಹ್ಯ ಶಕ್ತಿಗಳಿಂದಲೇ ಹೆಚ್ಚು ಆತಂಕ ಇದೆ. ನಾವು ಯಾರಿಗೆ ಸ್ವತಂತ್ರ ರಾಷ್ಟ್ರ ಆಗಲು ಸಹಾಯ ಮಾಡಿದೆವೋ ಅವರೇ ನಮ್ಮ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ಹಣ ಲೂಟಿ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಇಲ್ಲಿ ಹಣ ಸಂಗ್ರಹಿಸಿ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುವುದು ನೋಡಿದ್ದೇವೆ. ಬಹುಶಃ ಇದು ಆ ಸಮಯದಲ್ಲಿ ಸಂಗ್ರಹಿಸಿದ್ದು, ಈಗ ಹೀಗೆ ಆಯಿತೋ ಏನೋ ಗೊತ್ತಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ರಾಜೀವ್ ಗೌಡ ಬಂಧನ ಆಗದಿರುವ ವಿಚಾರವಾಗಿ, ಕಾಂಗ್ರೆಸ್ ಗೂಂಡಾಗಿರಿಯನ್ನು ಪ್ರಚೋದಿಸುವುದನ್ನು ನೋಡಿದ್ದೇವೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಮೇಲೆಯೇ ಹಲ್ಲೆ ಮಾಡುವ ರೀತಿ ವರ್ತನೆ ಮಾಡಿದವರು ಅವರ ಶಿಷ್ಯಂದಿರನ್ನು ರಸ್ತೆಯಲ್ಲಿ ಬೆಳೆಸಿಯೇ ಬೆಳೆಸುತ್ತಾರೆ. ಇಂತಹ ಸರ್ಕಾರಗಳು ಆದಷ್ಟು ಬೇಗ ಹೋಗಬೇಕು ಎಂದು ಹೇಳಿದರು.



