ಉಡುಪಿ : ಉಡುಪಿ ಕೃಷ್ಣಮಠದ ಶೀರೂರು ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ.ಟಿ.ಕೆ ಕೇಸರಿ ಧ್ವಜ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವಿವಾದಕ್ಕೆ ಗ್ರಾಸವಾಗಿತ್ತು. ಆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯ ಸೈಂಟ್ ಮೇರೀಸ್ ದ್ವೀಪದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿಸಿ ವಿರುದ್ಧ ಕಾಂಗ್ರೆಸ್ನವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದು ಧಾರ್ಮಿಕ ಕಾರ್ಯಕ್ರಮ. ಸಂಸ್ಕೃತಿ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿ ಆದಂತಹ ಜಿಲ್ಲೆ ಉಡುಪಿ.
ಇನ್ನೂ ಕೇಸರಿ ಧ್ವಜ ವಿಚಾರವಾಗಿ ದೂರು ಕೊಟ್ಟಿರುವುದು ಈಗಾಗಲೇ ನನಗೆ ತಿಳಿದಿದೆ. ಇದನ್ನು ಇಲ್ಲಿಗೆ ಬಿಟ್ಟುಬಿಡಬೇಕು. ಧಾರ್ಮಿಕ ಕಾರ್ಯಕ್ರಮದ ವಿಚಾರದಲ್ಲಿ ಜನರ ಮನೋಭಾವನೆಯನ್ನು ಕೆರಳಿಸುವಂತಹ ಕೆಲಸವನ್ನು ಮಾಡಲು ಹೋಗಬಾರದು. ಯಾರು ಏನೇ ಮಾತನಾಡಿದ್ದರೂ, ದೂರು ನೀಡಿದ್ದರೂ ಅವರ ಬಳಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.



