ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಕನ್ಯಾಡಿ ಪರಿಸರ ಪ್ರದೇಶದಲ್ಲಿ ನಡೆದಿದೆ.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚಿಸಿ, ಚಿರತೆ ಹೋಗುತ್ತಿದ್ದ ಸ್ಥಳಗಳನ್ನು ಗುರುತಿಸಿ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿಶೇಷ ಬೋನುಗಳನ್ನು ಇಟ್ಟಿತ್ತು. ಇದರ ಫಲವಾಗಿ ಇದೀಗ ಒಂದು ಚಿರತೆ ಬೋನಿಗೆ ಸಿಲುಕಿದೆ.
ಈ ಪ್ರದೇಶದಲ್ಲಿ ಚಿರತೆಯ ಓಡಾಟ ತೀವ್ರವಾಗಿದ್ದು, ಈ ಹಿಂದೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೆ, ಹಲವು ಸಾಕು ಪ್ರಾಣಿಗಳ ಮೇಲೂ ದಾಳಿ ನಡೆಸಿದ್ದ ಘಟನೆಗಳು ವರದಿಯಾಗಿದ್ದವು. ಇದರಿಂದ ಸ್ಥಳೀಯರಲ್ಲಿ ಭೀತಿ ಉಂಟಾಗಿತ್ತು. ಕೊನೆಗೂ ಬೋನು ಸ್ಥಾಪಿಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.



