ಬಾಗೇಪಲ್ಲಿ: ತಾಲೂಕಿನ ಗಂಟ್ಲಮಲ್ಲಮ್ಮ ಕಣವೆಯಲ್ಲಿ 200 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಡ್ಯಾಂ ಗೆ ಕೆಲವರು ಅಡ್ಡಿಪಡಿಸಲು ಯತ್ನಿಸುತ್ತಿರುವುದು ಸಹಿಸಲು ಸಾಧ್ಯವಿಲ್ಲ ಅವರ ತಾತಂದಿರೂ ಬಂದರೂ ಅದನ್ನು ತಡೆಯಲು ಸಾದ್ಯವಿಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಟ್ಟಣದ ಶಾಲಾ ಬಾಲಕಿಯರ ಶಾಲಾ ಸಂಕೀರಣದ ಆವರಣದಲ್ಲಿ ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ 77ನೇ ಣರಾಜ್ಯೋತ್ಸವ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಅವರು, ನಮ್ಮ ವಿರೋಧಿಗಳು ಯಾರೋ ಕೆಲವು 10 ಜನರ ಗುಂಪು ಕಟ್ಟಿಕೊಂಡು ಗಂಟ್ಲಮಲ್ಲಮ್ಮ ಕಣವೆಯಲ್ಲಿ ಡ್ಯಾಂ ನಿರ್ಮಾಣ ಮಾಡಲು ನಮ್ಮ ಕೃಷಿ ಭೂಮಿ ನೀಡುವುದಿಲ್ಲ ಎಂದು ಹೇಳಿರುವುದು ಖಂಡನೀಯ.
ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಕೆಲವರು ರಾಜಕೀಯ ದೃಷ್ಟಿ ಇಟ್ಟುಕೊಂಡು ಇಂತಹ ಪ್ರಚಾರಗಳು ಮಾಡುತ್ತಿದ್ದಾರೆ ಇದಕ್ಕೆ ಜನರು ಆಸ್ಪದ ನೀಡಬಾರದು ಎಂದರು. ಅಲ್ಲದೆ ಯಾರೇ ಈ ಬೃಹತ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೂ ಅದನ್ನು ಎದುರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಕಲ್ಪ ಮಾಡಿದ್ದೇನೆ.
ಮಹಾತ್ಮಗಾಂಧಿ, ನೆಹರು ಸರ್ದಾರ್ ವಲ್ಲಭಾಯ್ ಪಟೇಲ್ ಅಂತಹ ಮಹನೀಯರು ಬ್ರಿಟಿಷರ ವಿರುದ್ದ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದರು. ನಂತರ ದಿನಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್
ಅಧ್ಯಕ್ಷತೆಯಲ್ಲಿ ಕರಡು ಸಮಿತಿ ರಚನೆ ಮಾಡಿ ಸತತ 2ವರ್ಷಗಳ ಕಾಲ ವಿವಿಧ ದೇಶಗಳ ಸಂವಿಧಾನವನ್ನು ಅದ್ಯಯನ ಮಾಡಿ ವಿಶ್ವ ಮೆಚ್ಚುವಂತಹ ಜಾತಿ,ಧರ್ಮ ಬೇದವಿಲ್ಲದೆ
ಸಂವಿಧಾನವನ್ನು ನೀಡಿದ್ದಾರೆ. ಇದರಿಂದ ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ಹಕ್ಕು ಪ್ರತಿಪಾದನೆ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ನಾನು ಸತತ ಮೂರು ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಈಗ 13 ವರ್ಷ ಕಳೆದಿದೆ. ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಒಂದು ಸಾವಿರ ಕೋಟಿರೂಗಳ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಖುದ್ದು ಹಾಜರಾಗಿ ಚಾಲನೆ ನೀಡಲಿದ್ದಾರೆ. ಇಂತಹ ದೊಡ್ಡ ಕಾರ್ಯ ಕ್ರಮಗಳನ್ನು ಮಾಡಲು ಜನರ ಆಶೀರ್ವಾದವೇ ಪ್ರಮುಖ ಕಾರಣ ಎಂದರು.
ತಹಶೀಲ್ದಾರ್ ಮನೀಷ್.ಎನ್. ಪತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ವೇಳೆ ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ದೇಶ ಭಕ್ತಿ ಗೀತೆಗಳ ನೃತ್ಯ ಪ್ರದರ್ಶನ, ಗೀತೆ ಗಾಯನ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ತಾಪಂ ಇಒ ಜಿ.ವಿ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಪೊಲೀಸ್ ನಿರೀಕ್ಷಕ ಅಜಯ್ ಸಾರಥಿ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಆರ್.ಶಿವಪ್ಪ, ಪಶು ವೈದ್ಯಾಧಿಕಾರಿ ಕೃಷ್ಣಮೂರ್ತಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಶಿಕ್ಷಣ ಇಲಾಖೆ ತಾಲೂಕು ಸಮನ್ವಯ ಅಧಿಕಾರಿ ಆರ್.ವೆಂಕಟರಾಮಪ್ಪ, ಮುಖ್ಯ ಶಿಕ್ಷಕರಾದ ಕೆ.ವಿ.ಆದಿನಾರಾಯಣ, ಈಶ್ವರಪ್ಪ, ಪುರಸಭೆ ಸದಸ್ಯ ಪೋತು ಶ್ರೀನಿವಾಸರೆಡ್ಡಿ ಡಾ.ಕೃಷ್ಣಮೂರ್ತಿ, ಟಿಪಿಇಒ ರಂಗನಾಥ್ ಬಿ.ವಿ.ವೆಂಕಟರವಣ ಮತ್ತಿತರರು ಇದ್ದರು.



