ಬೆಂಗಳೂರು : ಪಕ್ಷದ ಕಚೇರಿ ನಿರ್ಮಾಣ ವಿಚಾರದಲ್ಲಿ ಆಸಕ್ತಿ ತೋರಿರುವ ಹಾಗೂ ತೋರದವರ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಎಐಸಿಸಿ ನಾಯಕರು ಕೇಳಿದ್ದು, ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಭವನ್ ಟ್ರಸ್ಟ್ ಸಮಿತಿ ಸಭೆ ಬಳಿಕ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಪ್ರಧಾನ ಕಾರ್ಯದರ್ಶಿಗಳು ಕಾಂಗ್ರೆಸ್ ಭವನದ ಟ್ರಸ್ಟಿಗಳಾಗಿದ್ದು, ಎಐಸಿಸಿ ಖಜಾಂಜಿಗಳು ಈ ಸಭೆಗೆ ಬಂದಿದ್ದರು. ಯಾವ ತಾಲೂಕಿನಲ್ಲಿ ಆಗಿದೆ, ಯಾವ ತಾಲೂಕಿನಲ್ಲಿ ಆಗಿಲ್ಲ, ಯಾರು ಇದರಲ್ಲಿ ಆಸಕ್ತಿ ವಹಿಸಿದ್ದಾರೆ, ಯಾರು ಆಸಕ್ತಿ ವಹಿಸಿಲ್ಲ ಎಲ್ಲವನ್ನು ವಿಮರ್ಶೆ ಮಾಡಿದ್ದಾರೆ. ಎಲ್ಲಿ ಕಟ್ಟಡ ಕಟ್ಟಲಾಗಿದೆ, ಎಲ್ಲಿ ಕಟ್ಟಿಲ್ಲ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ ಎಂದಿದ್ದಾರೆ.
ಮುಂದುವರೆದು ರಾಜ್ಯದಲ್ಲಿರುವ ಪಕ್ಷದ ಆಸ್ತಿಗಳು, ದಾಖಲೆಗಳು, ತೆರಿಗೆ ಪಾವತಿ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ನೂತನ ಕಚೇರಿ ನಿರ್ಮಾಣ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆದರು. ಹಾಗೂ ಗಾಂಧಿ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಸಿದ್ಧವಾಗಿದೆ ಎಂದು ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಅಬಕಾರಿ ಇಲಾಖೆಯಲ್ಲಿ ಕಳೆದ 2 ವರ್ಷದಲ್ಲಿ 6 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ ಎಂದು ಕೇಳಿದಾಗ, ಇದೆಲ್ಲವೂ ಸುಳ್ಳು ಆರೋಪ. ಅವರ ಆರೋಪಗಳು ರಾಜಕೀಯ ಪ್ರೇರಿತ. ಸಚಿವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.



