ಚಿಕ್ಕಬಳ್ಳಾಪುರ : ಕ್ರಿಕೆಟ್ ಮೊದಲಾಗಿ ಯಾವುದೇ ಕ್ರೀಡೆಗನ್ನು ಪ್ರೋತ್ಸಾಹಿಸಲು ಸರಕಾರ, ಸಂಘ ಸಂಸ್ಥೆಗಳು ಕಾಲಕಾಲಕ್ಕೆ ಏರ್ಪಡಿಸುವ ಕ್ರೀಡಾಕೂಟಗಳು ಯುವ ಶಕ್ತಿಯಲ್ಲಿ ಕ್ರೀಡಾ ಮನೋಭಾವದ ಜತೆಗೆ ಸಾಮರಸ್ಯ ಬೆಸೆಯುವ ಉತ್ತಮ ವೇದಿಕೆಗಳಾಗಲಿವೆ ಎಂದು ಎಎಸ್‌ಪಿ ಜಗನ್ನಾಥ್ ರೈ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಹ್ಯಾರೀಸ್ ಹುಟ್ಟು ಹಬ್ಬದ ಅಂಗವಾಗಿ ಲಯನ್ ಕರಿಕೇರ‍್ಸ್ ಆಯೋಜಿಸಿರುವ ಮೂರು ದಿನಗಳ (ಜ.28 ರಿಂದ 30ರ ತನಕ) ಹೊನಲು ಬೆಳಕಿನ ಡಿಕೆಎಸ್ ಟೆನ್ನೀಸ್ ಬಾಲ್ ಕ್ರಿಕೆಟ್ ಟೂರ್ನ ಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳು ಮನೋದೈಹಿಕ ವಿಕಾಸಕ್ಕೆ ನೆರವಾಗಲಿವೆ. ಸರಕಾರಿ ಇಲಾಖೆ ಮಾಡಬಹುದಾದ ರೀತಿಯಲ್ಲಿ ಅಚ್ಚುಕಟ್ಟಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿರುವ ಲಯನ್ಸ್ ಕ್ರಿಕೆರ‍್ಸ್ ತಂಡದ ನಾಯಕ ಜಗದೀಶ್ ಮತ್ತು ತಂಡ ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಮುಂದುವರೆದು ಯುವ ಶಕ್ತಿ ಆನ್ಲೈನ್ ಗೇಮ್‌ಗಳಲ್ಲಿ ಮುಳುಗಿರುವ ಹೊತ್ತಿನಲ್ಲಿ ಕ್ರಿಕೆಟ್ ಆಟದ ಮೂಲಕ ಕ್ರೀಡೆಗಳತ್ತ ಯುವ ಸಮೂಹವನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಅಭಿನಂದ ನಾರ್ಹ ವಿಚಾರ.
ಇನ್ನೂ ಈ ಕ್ರೀಡಾ ಕೂಟದ ವಿಶೇಷ ಎಂದರೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ, ಆರೋಗ್ಯ ಇಲಾಖೆ, ಮಾಧ್ಯಮ ವಿಭಾಗದ ಜತೆಗೆ ಯುವಕ ಸಂಘಗಳು ಭಾಗವಹಿಸಿರುವುದೇ ಆಗಿದೆ. ಇಂತಹ ಕ್ರೀಡಾಕೂಟಗಳು ಇನ್ನೂ ಹೆಚ್ಚೆಚ್ಚು ನಡೆಯಲಿ, ಯುವಶಕ್ತಿಯಲ್ಲಿ ಕ್ರೀಡಾಭಿಮಾನ ಮೂಡಲಿ ಎಂದು ಶುಭ ಹಾರೈಸಿದರು.
ನಂತರ ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜಿನಪ್ಪ ಮಾತನಾಡಿ, ಹೊನಲು ಬೆಳಕಿನಲ್ಲಿ ಕ್ರೀಡಾಕೂಟ ನಡೆಯುತ್ತಿರುವುದು ಮನಸ್ಸಿಗೆ ಮುದ ನೀಡಲಿದೆ. ಈ ಆಟವನ್ನು ನೋಡುವ ವಿದ್ಯಾರ್ಥಿಗಳಿಗೆ ನಾನೂ ಕೂಡ ಕ್ರೀಡಾಪಟು ಆಗಬೇಕು ಎಂಬ ಪ್ರೇರಣೆಯನ್ನು ಖಂಡಿತ ನೀಡಲಿದೆ. ದೈಹಿಕವಾಗಿ ನಾವು ಸದೃಢರಾಗಲು ಕ್ರೀಡೆಗಳಲ್ಲಿ ಭಾಗಿಯಾಗುವುದು ಮುಖ್ಯ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಪ್ಪದೆ ಶಿಕ್ಷಣದ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸುವು ದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು ಹಾಗೂ ಕ್ರೀಡಾಕೂಟದ ಆಯೋಜಕರಾದ ಜಗದೀಶ್ ಅವರಿಗೆ ಈ ವೇಳೆ ಶುಭ ಕೋರಿದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿ, ಕ್ರೀಡಾಕೂಟಗಳಲ್ಲಿ ಭಾಗಿಯಾಗುವ ಯಾರೇ ಆಗಲಿ ಸ್ಫೂರ್ತಿ ತುಂಬುವ ರೀತಿಯಲ್ಲಿ ಆಟೋಟಗಳಲ್ಲಿ ಭಾಗಿಯಾಗಬೇಕು. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಕ್ರೀಡಾಪಟುವಿಗೆ ನೆನಪಿನಲ್ಲಿರಬೇಕು. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಈ ಕ್ರೀಡಾಕೂಟ ಯಶಸ್ವಿಯಾಗಲಿ. ಭಾಗವಹಿಸಿರುವ ಕ್ರೀಡಾಪಟುಗಳಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ರೈತ ಸಂಘದ ಮುಖಂಡರಾದ ಸುಷ್ಮಾ ಶ್ರೀನಿವಾಸ್ ಮಾತನಾಡಿ ಕ್ರೀಡೆಗಳು ಯುವಶಕ್ತಿಯಲ್ಲಿ ಹುರುಪು ತುಂಬಲಿದೆ. ಹಣ ಅಥವಾ ಪ್ರಶಸ್ತಿ ಮುಖ್ಯವಲ್ಲ, ಕ್ರೀಡಾಸ್ಪೂರ್ತಿಯಿಂದ ಆಟವಾಡುವುದೇ ಮುಖ್ಯವಾಗಲಿ. ಗ್ರಾಮೀಣ ಪ್ರದೇಶದಲ್ಲಿ ಜಗದೀಶ್ ಮತ್ತು ತಂಡ ಕ್ರೀಡಾ ಕೂಟ ಆಯೋಜಿಸಿ ಯುವ ತಲೆಮಾರಿಗೆ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಅತಿಥಿಗಳು ಮತ್ತು ಮಾಧ್ಯಮ ಮಿತ್ರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಉದ್ಘಾಟನೆ ಮಾಡಿದ ಮೊದಲ ದಿನವೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಕೀಲರ ತಂಡ, ಮಾಧ್ಯಮ ವಿಭಾಗದ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಪೊಲೀಸ್ ತಂಡ ವಕೀಲರ ತಂಡದ ವಿರುದ್ದ ಗೆಲುವು ಸಾಧಿಸಿದರು.
ಇದೇ ವೇಳೆ ವಿಶ್ವೇಶ್ವರಯ್ಯ ಶಾಲೆಯ ಅಧ್ಯಕ್ಷ ಪ್ರಕಾಶ್ ಮಾತನಾಡಿದರು. ಈ ವೇಳೆ, ಕ್ರೀಡಾ ಕೂಟದ ಆಯೋಜಕರಾದ ಯುವ ಮುಖಂಡ ಎಸ್.ಎಂ.ಜಗದೀಶ್, ಶಂಕರ್, ಹರೀಶ್‌ರೆಡ್ಡಿ, ಮುಷ್ಟೂರು ಹರೀಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮತ್ತಿತರರು ಇದ್ದರು.



