ಹೆಚ್. ಡಿ. ಕೋಟೆ : ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮ ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿಯ ಕೆ ಎಡತೊರೆ ಹನುಮಂತನಗರ ಹಾಡಿಯಲ್ಲಿ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ವತಿಯಿಂದ ಗಿರಿಜನ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಣ್ಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ನಾಗ ನಮ್ಮ ಪಂಚಾಯಿತಿಗೆ ಏಳು ಹಾಡಿಗಳು ಬರುತ್ತವೆ. ಅದರಲ್ಲಿ ಹನುಮಂತನಗರ ಒಂದು ಹಾಡಿ. ಈ ಹಾಡಿಗೆ ಪಂಚಾಯಿತಿಯಿಂದ ಮನೆಗಳು, ರಸ್ತೆ, ಶುದ್ಧ ಕುಡಿಯುವ ನೀರು, ವಿದ್ಯುತ್ ದೀಪ , ನೂತನವಾಗಿ ಅಂಗನವಾಡಿ ಕಟ್ಟಡ ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದರು.

ನಮ್ಮ ಜೊತೆಗೆ ಸ್ವಾಮಿ ವಿವೇಕಾನಂದ ಸಂಸ್ಥೆಯವರು ಕೈಜೋಡಿಸಿದ್ದು, ಆದಿವಾಸಿಗಳು ಸ್ವಾವಲಂಬಿಗಳಾಗಿ ಬದುಕಲು ಮೂಲಭೂತ ಸೌಕರ್ಯಗಳನ್ನು ಅವರ ಸಂಸ್ಥೆ ವತಿಯಿಂದ ನೀಡುತ್ತ ಆದಿವಾಸಿಗಳಿಗೆ, ಹಸು , ಮೇಕೆ, ಕೋಳಿ , ಕೃಷಿ ಚಟುವಟಿಕೆಗಳ ತರಬೇತಿ ,ಸಿರಿಧಾನ್ಯ ಬೆಳೆಯಲು ಉತ್ತೇಜನ , ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು, ವೈದ್ಯಕೀಯ ಸೌಲಭ್ಯ ನೀಡುತ್ತಾ ಗಿರಿಜನರ ಸೇವೆ ಮಾಡುತ್ತಿರುವ ಸ್ವಾಮಿ ವಿವೇಕಾನಂದ ಸಂಸ್ಥೆಗೆ ಅಭಿನಂದನೆ ತಿಳಿಸಿದರು.
ಸಂಸ್ಥೆಯ ಶಂಕರ್ ಮಾತನಾಡಿ , ನಮ್ಮ ಸಂಸ್ಥೆ ಆದಿವಾಸಿ ಮಹಿಳೆಯರಿಗೆ ಸ್ವಸಹಾಯ ಸಂಘದ ಮುಖಾಂತರ ತರಬೇತಿ ನೀಡುವುದು ,ಅವರು ಸ್ವಾವಲಂಬಿಗಳಾಗಿ ಬದುಕಲು ಈಗಾಗಲೇ ಸಂಸ್ಥೆ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆದಿವಾಸಿ ಮಹಿಳೆ ತಿಮ್ಮಿ ಮಾತನಾಡಿ ನಾನು ಈ ಹಿಂದೆ ಹಾಸ್ಪಿಟಲ್ ಗಳಿಗೆ ಹೋಗಲು ಭಯ ಪಡುತ್ತಿದ್ದೆ, ನಂತರದ ದಿನಗಳಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆಯವರು ನಮ್ಮ ಹಾಡಿಗಳಿಗೆ ಬಂದು ಉಚಿತ ಚಿಕಿತ್ಸೆ ನೀಡುತ್ತಾ, ಧೈರ್ಯ ತುಂಬಿ ಮಹಿಳಾ ಸಂಘ ರಚನೆ ಮಾಡಿ ನಮಗೆ ತರಬೇತಿ ನೀಡಿ, ನಾವು ಎಲ್ಲರಂತೆ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಸಂಸ್ಥೆಗೆ ನಾವು ಋಣಿಯಾಗಿರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಡತೊರೆ ಮಹೇಶ್, ಸುರೇಶ್ , ಭಾಗ್ಯಮ್ಮ, ದೀಪಿಕಾ, ಆದಿವಾಸಿ ಮುಖಂಡ , ಕೆಂಪ , ಕಾಳ, ಪ್ರಸಾದಿ, ಶೋಭಾ, ಪುಟ್ಟಮ್ಮ ಸೇರಿದಂತೆ ವಿವೇಕಾನಂದ ಸಂಸ್ಥೆಯ ಸಿಬ್ಬಂದಿ ವರ್ಗದವರು, ಆದಿವಾಸಿ ಮಹಿಳೆಯರು ಭಾಗವಹಿಸಿದ್ದರು.



