ಚಾಮರಾಜನಗರ : ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಮಿಶ್ರಿತ ಪ್ರಸಾದ ವಿತರಣೆ ಮಾಡಿ 17 ಮಂದಿ ದುರ್ಮರಣಕ್ಕೆ ಕಾರಣರಾದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಮಲೆ ಮಹದೇಶ್ವರ ಬೆಟ್ಟ ಪ್ರವೇಶಕ್ಕೆ ಕೊಳ್ಳೇಗಾಲ ತಹಶೀಲ್ದಾರ್ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.
ಇಮ್ಮಡಿ ಮಹದೇವಸ್ವಾಮಿ ಅವರು ಚಿಕಿತ್ಸೆ ನೆಪದಲ್ಲಿ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ಒಂದು ವರ್ಷದ ಅವಧಿಗೆ ಜೈಲಿನಿಂದ ಬಿಡುಗಡೆಗೊಂಡಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.
ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಕೊಳ್ಳೇಗಾಲ ತಹಶೀಲ್ದಾರ್ ಚೈತ್ರ ಅವರು ಪೆರೋಲ್ ಮೂಲಕ ಬಿಡುಗಡೆಯಾಗಿರುವ ಆರೋಪಿ ಇಮ್ಮಡಿ ಮಹದೇವಸ್ವಾಮಿ ಅವರಿಗೆ ಜ. 29ರಿಂದ ಮುಂದಿನ ಆದೇಶದ ತನಕ ಮಲೆ ಮಹದೇಶ್ವರ ಬೆಟ್ಟ ಪ್ರವೇಶಿಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.



