ಬೆಂಗಳೂರು : ಕೇರಳ ಮೂಲದ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಸಿಇಓ ಸಿ.ಜೆ ರಾಯ್ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ಆದ ದಾಳಿಗೆ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇದ್ದವು. ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು. ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನ ವಿಸ್ತರಿಸಿದ್ದಾರೆ. ಅಲ್ಲದೇ, ಅವರು ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಸೇವೆ ಸಲ್ಲಿಸಿದ್ದರು.
ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಯ್, ದುಬೈ ಮತ್ತು ಭಾರತದಲ್ಲಿ ಹಲವು ದುಬಾರಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನೂ ಹೊಂದಿದ್ದರು. ರೋಲ್ಸ್ ರಾಯ್ಸ್‌ಗಳು, ಲ್ಯಾಂಬೋರ್ಗಿನಿಗಳು, ಮತ್ತು ಬಗ್ಗಾಟಿ ವೆರಾನ್‌ನಂತಹ ಕಾರುಗಳು ಅವರ ಗ್ಯಾರೇಜ್‌ನಲ್ಲಿವೆ ಎಂದು ತಿಳಿದುಬಂದಿದೆ.
ಕಾನ್ಫಿಡೆಂಟ್ ಗ್ರೂಪ್ ಕೇವಲ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಡಾ. ರಾಯ್ ಅವರ ಬಹುಮುಖ ಪ್ರತಿಭೆ ಮತ್ತು ಆಸಕ್ತಿಗಳು ಸಂಸ್ಥೆಯನ್ನ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ಕಾರಣವಾಗಿವೆ. ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್‌ನ ಮಲಯಾಳಂ ಚಿತ್ರವನ್ನು ಸಹ ನಿರ್ಮಿಸಿದ್ದಾರೆ. 2006 ರಲ್ಲಿ, ‘ಐಡಿಯಾ ಸ್ಟಾರ್ ಸಿಂಗರ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅನ್ನು ಪ್ರಚಾರ ಮಾಡುವ ಅವರ ಆಲೋಚನೆ ಯಶಸ್ವಿಯಾಗಿತ್ತು.
ಸಿ.ಜೆ.ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನ ಹುಟ್ಟುಹಾಕಿದ್ದರು. ಪದೇ ಪದೇ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
IT ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಎರಡು ಇನ್ನೋವಾ ಕಾರುಗಳಲ್ಲಿ 8 ಜನರ ಅಧಿಕಾರಿಗಳ ತಂಡ ಬಂದಿತ್ತು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, 1 ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಮ್‌ಗೆ ಹೋಗಿದ್ದಾರೆ. ಈ ವೇಳೆ ಪಿಸ್ತೂಲ್ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಒಂದು ಸುತ್ತು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಗನ್ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು, ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ ರಾಯ್. ಹೆಚ್‌ಎಸ್‌ಆರ್ ಲೇಔಟ್ ನಾರಾಯಣ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ.
ಘಟನೆ ಬೆನ್ನಲ್ಲೇ ಹಲವು ಅನುಮಾನಗಳು ಮೂಡಿವೆ. ಸಹಜವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆಯುತ್ತಾರೆ. ಆದ್ರೆ ರಾಯ್ ಬಳಿಯಿದ್ದ ಗನ್ ವಶಕ್ಕೆ ಪಡೆಯದಿರುವ ಬಗ್ಗೆ ಅನುಮಾನ ಹುಟ್ಟುಹಾಕಿದೆ.
ಘಟನೆ ಬಳಿಕ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ನಂತರ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ದಾಖಲೆಗಳನ್ನ ವಶಕ್ಕೆ ಪಡೆದು ತೆರಳಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.



