ಮಡಿಕೇರಿ : ತೀವ್ರತರವಾದ ಮತ್ತು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣೀಯರಿಗೆ ಲಸಿಕಾ ಡೋಸ್‍ಗಳನ್ನು ತಲುಪಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ 5.0-ದಡಾರ-ರುಬೆಲ್ಲಾ ನಿರ್ಮೂಲನೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.ವಿವಿಧ ಕಾರಣಗಳಿಂದ ಬಿಟ್ಟು ಹೋಗಿರುವ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣೀಯರಿಗೆ ಮಿಷನ್ ಇಂದ್ರಧನುಷ್ 5.0 ದಡಾರ-ರುಬೆಲ್ಲಾ ನಿರ್ಮೂಲನೆ ಮಾಡಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿ ಮಿಷನ್ ಇಂದ್ರಧನುಷ್ ಅನುಷ್ಠಾನ ಸಂಬಂಧಿಸಿದಂತೆ ಆಗಸ್ಟ್, 07 ರಂದು ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಆಗಸ್ಟ್, 07 ರಿಂದ 12 ರವರೆಗೆ ಮೊದಲ ಸುತ್ತು, ಸೆಪ್ಟೆಂಬರ್, 11 ರಿಂದ 16 ರವರೆಗೆ ಎರಡನೇ ಸುತ್ತು ಮತ್ತು ಅಕ್ಟೋಬರ್, 09 ರಿಂದ 14 ರವರೆಗೆ ಮೂರನೇ ಸುತ್ತಿನಲ್ಲಿ ಮಿಷನ್ ಇಂದ್ರಧನುಷ್ ಲಸಿಕಾಕರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇಂದ್ರಧನುಷ್ ಲಸಿಕಾಕರಣಕ್ಕೆ 2 ವರ್ಷದೊಳಗಿನ 1,169 ಮಕ್ಕಳು ಹಾಗೆಯೇ 2 ರಿಂದ 5 ವರ್ಷದೊಳಗಿನ 23 ಮಕ್ಕಳಿಗೆ ಜೊತೆಗೆ 278 ಗರ್ಭಿಣೀಯರಿಗೆ ಲಸಿಕಾ ಡೋಸ್ ನೀಡಲು ಬಾಕಿ ಇದೆ ಎಂದು ಡಾ.ಗೋಪಿನಾಥ್ ಅವರು ವಿವರಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣೀಯರು ಮತ್ತು 5 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಅಧಿಕಾರಿ ಮತ್ತು ಆಶಾ ಕಾರ್ಯಕರ್ತರಿಗೆ ನೀಡುವಂತಾಗಬೇಕು. ಮನೆ ಮನೆಗೆ ಭೇಟಿ ಮಾಡಿ ಲಸಿಕೆ ಪಡೆಯಬೇಕಿರುವ, ಇದುವರೆಗೆ ಪಡೆಯದಿರುವ, ಹಾಗೆಯೇ ಬಿಟ್ಟು ಹೋಗಿರುವ ಪಟ್ಟಿ ಮಾಡಿ ಒದಗಿಸುವಂತೆ ಕೋರಿದರು.ವಿಶೇಷವಾಗಿ 2 ರಿಂದ 5 ವರ್ಷದೊಳಗಿನ ಮಕ್ಕಳು ದಡಾರ, ರುಬೆಲ್ಲಾ-2, ಡಿಬಿಟಿ ಬೂಸ್ಟರ್, ಒಪಿವಿ ಬೂಸ್ಟರ್ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಕೋರಿದರು.
ಗರ್ಭಿಣಿ ಮಹಿಳೆಯರ ಟಿಡಿ ಲಸಿಕಾಕರಣ ಮತ್ತು ಮಕ್ಕಳ ಲಸಿಕಾಕರಣದ ಕುರಿತು ಮಾಹಿತಿ ನೀಡುವುದು. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು, ತೋಟದ ಮನೆಗಳು, ವಲಸಿಗರು, ಹೀಗೆ ಹಲವು ಅರ್ಹರು ಲಸಿಕಾಕರಣದಿಂದ ಬಿಟ್ಟು ಹೋಗಿದ್ದರೆ ಮಾಹಿತಿ ನೀಡುವುದು. ಅಭಿಯಾನದ ಸಮಯದಲ್ಲಿ ಅಂಗನವಾಡಿ ಕೇಂದ್ರ ತೆರೆಯಬೇಕು ಎಂದರು.ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ತೀವ್ರತರವಾದ ಇಂದ್ರಧನುಷ್ 5.0 ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವುದು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳನ್ನು ಗುರುತಿಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಾಗಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲವು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.‘ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ’ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರತಂದಿರುವ ಪೋಸ್ಟರ್‍ನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಾ.ಆನಂದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ ಪೊನ್ನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜು, ಡಾ.ಚೇತನ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಸಪ್ಪ, ನಗರಸಭೆ ಎಂಜಿನಿಯರ್ ಸೌಮ್ಯ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಇತರರು ಇದ್ದರು.