ಗುಂಡ್ಲುಪೇಟೆ: ನೆರೆಯ ತಮಿಳುನಾಡಿನ ಮಧುಮಲೈ ಅಭಯಾರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಆ.5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿರುವ ಹಿನ್ನಲೆ ತಾಲೂಕಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಜಿಲ್ಲಾ ಪೊಲೀಸ್ ವತಿಯಿಂದ ಇಂದು ಪೂರ್ವ ತಾಲೀಮು ನಡೆಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೆಲಿಕ್ಯಾಪ್ಟರ್ ಮೂಲಕ ಮೈಸೂರಿನಿಂದ ತಮಿಳುನಾಡಿನ ಮಧುಮಲೈಗೆ ತೆರಳಲಿದ್ದು, ಹವಾಮಾನ ವೈಪರಿತ್ಯದ ಉಂಟಾದರೆ ರಸ್ತೆ ಮಾರ್ಗದಲ್ಲಿ ಹೋಗುವ ಸಾಧ್ಯತೆ ಇರುವುದರಿಂದ ಮೈಸೂರಿನಿಂದ ಬಂಡೀಪುರದ ಗಡಿವರೆಗೆ ರಾಷ್ಟ್ರಪತಿಗಳ ಕಾನ್ವೆ ಇಂದು ಪೂರ್ವ ತಾಲೀಮು ನಡೆಸಿದ್ದಾರೆ.
ಈ ಬಗ್ಗೆ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಪದ್ಮಿನಿ ಸಾಹು ಪ್ರತಿಕ್ರಿಯೆ ನೀಡಿ, 150 ಪೊಲೀಸ್ ಸಿಬ್ಬಂದಿಗಳ ತಂಡವನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ರೂಟ್ ಮ್ಯಾಪ್ ಪ್ರಕಾರ ಅವರು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲಿದ್ದು, ಹವಾಮಾನ ವೈಪರಿತ್ಯ ಉಂಟಾದರೆ ರಸ್ತೆ ಮೂಲಕ ಸಂಚರಿಸಲಿದ್ದಾರೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದ ಗಿರಿಜನ ದಂಪತಿ ಬೊಮ್ಮ ಬೆಳ್ಳಿಯನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದರು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ.