ಚಿಕ್ಕಬಳ್ಳಾಪುರ : ಜಿಲ್ಲೆಗೆ ಶುದ್ಧ ಕುಡಿಯುವ ನೀರನ್ನು ಕೊಡುವ ಮಹಾತ್ವಾಕಾಂಕ್ಷಿ ಯೋಜನೆ ಯಾದ ಎತ್ತಿನಹೊಳೆ ನೀರು ತುಮಕೂರಿನ ತನಕ ಬಂದಿದ್ದು 2027ರ ಹೊತ್ತಿಗೆ ಜಿಲ್ಲೆಗೆ ಹರಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಈ ಕುರಿತು ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಂದಾಯ ವಿಷಯಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ಪ್ರಾರಂಭವಾಗಿದ್ದು ಚಿಕ್ಕಬಳ್ಳಾಪುರದಲ್ಲಿ ತಾನೆ. ಆಗಿನಿಂದ ಈವರೆಗೆ ಎಷ್ಟೆಲ್ಲಾ ಸರಕಾರಗಳು ಬದಲಾಗಿವೆ, ಯರ‍್ಯಾರು ಸಚಿವರಾಗಿದ್ದರು ಎಂಬುದು ಗೊತ್ತಿದೆ. ಆಗಿನಿಂದಲೇ ಕಾಲಮಿತಿಯಲ್ಲಿ ಈ ಯೋಜನೆ ಮುಗಿಸಿದ್ದರೆ ಅನುದಾನದ ಗಾತ್ರ ಹಿಗ್ಗುತ್ತಲೇ ಇರಲಿಲ್ಲ ಎಂದರು.
ಮುಂದುವರೆದು, 12 ವರ್ಷಗಳಲ್ಲ ಸಿಮೆಂಟ್, ಕಲ್ಲು ಕಬ್ಬಿಣ, ಭೂಮಿ ಬೆಲೆ ಹೆಚ್ಚಿದಂತೆ ಪ್ರಾಜೆಕ್ಟ್ ಗಾತ್ರವೂ ಹಿಗ್ಗುವುದು ಸಹಜ. ವಿಳಂಬವಾದರೂ ಜಿಲ್ಲೆಗೆ ನೀರು ಬಂದೇ ಬರಲಿದೆ. ಲಾಲಬಹದ್ದೂರ್ ಶಾಸ್ತ್ರೀ ಶಂಕುಸ್ಥಾಪನೆ ಮಾಡಿದ್ದ ಆಲಮಟ್ಟಿ ಜಲಾಶಯ ಪೂರ್ಣಗೊಂಡು ಲೋಕಾರ್ಪಣೆ ಆಗಿದ್ದು ಯಾವಾಗ ಎಂಬುದು ಟೀಕೆ ಮಾಡುವವರು ಅರಿತರೆ ಒಳಿತು ಎಂದರು.
ಇನ್ನೂ ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಂದಾಯ ಗ್ರಾಮ ಅಭಿಯಾನದಡಿ 30 ಸಾವಿರ ಹಕ್ಕು ಪತ್ರಗಳನ್ನು ಕೊಡಲು ಗುರಿ ನಿಗದಿಪಡಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರಲ್ಲದೆ ಸ್ವಾತಂತ್ರ‍್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ.
ಆ ಹಿನ್ನೆಲೆಯಲ್ಲಿ ಸರ್ಕಾರ ಕಂದಾಯ ಗ್ರಾಮ ಅಭಿಯಾನ ವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಕರಾರುವಕ್ಕಾಗಿ ಮಾಡಲಾಗುತ್ತಿದೆ ಎಂದರು.
ಕನಿಷ್ಠ 10 ಮನೆಗಳ ವಾಸವಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈಗಿರುವ ಗ್ರಾಮಗಳು, ಕಂದಾಯ ಗ್ರಾಮಗಳನ್ನು ಹೊರತು ಪಡಿಸಿ ದಾಖಲೆ ಇಲ್ಲದೆ ವಾಸ ಮಾಡುತ್ತಿರುವ ಜನವಸತಿ ಪ್ರದೇಶಗಳನ್ನು ಗುರುತಿಸುವಂತಹ ಕೆಲಸವನ್ನು ಕಂದಾಯ ಇಲಾಖೆ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಸರ್ವೆ ಇಲಾಖೆಗಳು ಸಮನ್ವಯ ಸಾಧಿಸಿ ಕೊಂಡು ಮಾಡುತ್ತಿವೆ. ಜಿಲ್ಲೆಯಲ್ಲಿ ಪ್ರಸ್ತುತ 1522 ಮೂಲ ಕಂದಾಯ ಗ್ರಾಮಗಳಿದ್ದು, ಈ ಪೈಕಿ 344 ಗ್ರಾಮಗಳನ್ನು ಕಂದಾಯ ಗ್ರಾಮ, ಉಪಗ್ರಾಮ ಹಾಗೂ ಗ್ರಾಮಠಾಣಾ ವಿಸ್ತರಣೆ ಎಂದು ಗುರುತಿಸಲಾಗಿದೆ.
ಈ ಪ್ರದೇಶಗಳನ್ನು ಹೊರತುಪಡಿಸಿ ಬಾಕಿ ಇರುವ ದಾಖಲೆ ರಹಿತ ಜನವಸತಿಗಳನ್ನು ಗುರುತಿಸುವ ಕೆಲಸ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಒಟ್ಟಾರೆ ದಾಖಲೆ ಇಲ್ಲದೆ ವಾಸಿಸುತ್ತಿರುವ ನಿವಾಸಿಗಳಿಗೆ 30000 ಹಕ್ಕುಪತ್ರಗಳನ್ನು ನೀಡಲು ಜಿಲ್ಲಾಡಳಿತದಿಂದ ಕ್ರಮವಹಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದರಖಾಸ್ತು ಪೋಡಿ, ಇ ಪೌತಿ ಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರಗಳು ಸೇರಿದಂತೆ ಕಂದಾಯ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ಮಾನ್ಯ ಕಂದಾಯ ಸಚಿವರಿಂದ ಈ ತಿಂಗಳ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ವಿತರಣೆ ಮಾಡಲು ಯೋಜಿಸಲಾಗಿದೆ. ಅಂದು ಆಶ್ರಯ ಯೋಜನೆಯಡಿ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿ 2243 ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು. 2790 ದರಖಾಸ್ತು ಪೋಡಿ, 1956 ಕಂದಾಯ ಗ್ರಾಮಗಳ ಹಕ್ಕುಪತ್ರಗಳು, 4858 ಇ-ಪೌತಿ ಖಾತೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ 3200 ಫಲಾನುಭವಿಗಳಿಗೆ ಸೌಲತ್ತುಗಳ ದೊರಕಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪ್ರಸ್ತುತದ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 11000 ಕ್ಕೂ ಹೆಚ್ಚು ಪೋಡಿಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ 10000 ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸವಲತ್ತು ಗಳನ್ನು ನೀಡಲು ಜಿಲ್ಲೆಯಲ್ಲಿ ಗುರಿ ಹೊಂದಲಾಗಿದ್ದು, ಸಂಬಂಧಪಟ್ಟ ಸಿಬ್ಬಂದಿ ಪ್ರತಿ ಮನೆಮನೆಗೆ ಭೇಟಿ ಕೊಟ್ಟು ಅಭಿಯಾನದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ 1.9 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಈಗಾಗಲೇ ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗಿದ್ದು, ಈ ಪೈಕಿ ೨ ಲಕ್ಷ ದಾಖಲೆಗಳನ್ನು ಸಾರ್ವಜನಿಕರು ಆನ್ ಲೈನ್ ಮೂಲಕ ದೃಢೀಕೃತ ದಾಖಲೆಗಳನ್ನು ಹಣ ಪಾವತಿಸಿ ಪಡೆಯಬಹುದು. ಕೆಐಎಡಿಬಿ ವತಿಯಿಂದ ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಗಾಗಿ 8000ಕ್ಕೂ ಹೆಚ್ಚು ಎಕರೆ ಜಮೀನನ್ನು ಗುರ್ತಿಸಲಾಗಿದ್ದು, ಕೈಗಾರಿಕಾ ವಲಯ ಅಭಿವೃದ್ಧಿಯ ಕಾಮಗಾರಿಗಳಿಗೆ ಹಾಗೂ ಭೂ ಸ್ವಾಧೀನ ಕಾರ್ಯಗಳಿಗೆ ವೇಗ ನೀಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ತೆಗೆದು ಕೊಳ್ಳಲಾಗುತ್ತಿದೆ ಎಂದರು.
ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಯೋಜನೆಯು ಮುಂದಿನ ವರ್ಷದ ವೇಳೆಗೆ ಜಿಲ್ಲೆಗೆ ನೀರು ಲಭ್ಯವಾಗುವ ಸಾಧ್ಯತೆ ಇದೆ ಈ ಎತ್ತಿನ ಹೊಳೆ ನೀರನ್ನು ಜಿಲ್ಲೆಯಲ್ಲಿ ಸದುಪಯೋಗಪಡಿಸಿಕೊಳ್ಳಲು ಪೂರ್ವ ಸಿದ್ದತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ವೈ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.



