Tuesday, February 10, 2026
Google search engine

Homeರಾಜ್ಯನಮ್ಮ ದೇಶದ ಅಭಿವೃದ್ಧಿ ಹಳ್ಳಿಗಳಿಂದಲೇ ಪ್ರಾರಂಭವಾಗಬೇಕು : ಡಾ.ಸತೀಶ್ಚಂದ್ರ.ಎಸ್

ನಮ್ಮ ದೇಶದ ಅಭಿವೃದ್ಧಿ ಹಳ್ಳಿಗಳಿಂದಲೇ ಪ್ರಾರಂಭವಾಗಬೇಕು : ಡಾ.ಸತೀಶ್ಚಂದ್ರ.ಎಸ್

ಉಜಿರೆ : ಜನಸಂಖ್ಯೆಯಲ್ಲಿ ಮುಂದಿರುವ, ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಶಾಂತಿಯ ಕೊರತೆ, ಬಡತನ ಕಂಡುಬರುತ್ತಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ನಡೆಯು ತ್ತಿರುವ ಹಲವಾರು ಕೆಲಸಗಳು ಭೂಮಿಯ ಮೇಲೆ, ಪರಿಸರ ಮೇಲೆ ಪ್ರಭಾವ ಬೀರುತ್ತಿವೆ. ಭಾರತ ಹಳ್ಳಿಗಳ ದೇಶವಾದ್ದರಿಂದ ನಮ್ಮ ದೇಶದ ಅಭಿವೃದ್ಧಿ ಹಳ್ಳಿಗಳಿಂದಲೇ ಪ್ರಾರಂಭವಾಗಬೇಕು ಎಂದು ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಧ.ಮಂ. ಕಾಲೇಜಿನಲ್ಲಿ ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ ಕುರಿತ ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಇಂದು (ಫೆ.9) ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಜಂಟಿ ಸಹಭಾಗಿತ್ವದಲ್ಲಿ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಾಕೃತಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಕೇವಲ ನಾವು ಮಾತ್ರ ಉಪಯೋಗಿಸುವುದಲ್ಲದೇ ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಗೆ ಹಲವಾರು ತೊಂದರೆಗಳಾಗುತ್ತಿದ್ದು, ಇದರಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ.

ಕಳೆದ ಎರಡು ವರ್ಷಗಳನ್ನು ನೋಡುವುದಾದರೆ ಶೇ.68ರಷ್ಟಿದ್ದ ಗ್ರಾಮ್ಯ ಪ್ರದೇಶಗಳು ಇಂದು ಶೇ.63ಕ್ಕೆ ಇಳಿದಿವೆ. ಹಳ್ಳಿಗಳ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಪ್ರಾರಂಭವಾಗಬೇಕು. ವಿದ್ಯಾರ್ಥಿಗಳು ಗ್ರಾಮೀಣ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಕುರಿತು ಹೆಚ್ಚು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ವಿದ್ಯಾರ್ಥಿಗಳಿಗೆ ಸಹಾಯಕ ಎಂದರು.

ಅತಿಥಿ, ಅಮೆರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮರಿಯಾನೋ ರೋಜಸ್ ಶುಭಾಶಯ ತಿಳಿಸಿದರು.

ಬಳಿಕ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ.ಪಿ., ಗ್ರಾಮ್ಯ ಪ್ರದೇಶಗಳು ನಿರ್ದಿಷ್ಟ ಕೆಲಸದ ಅವಕಾಶಗಳು, ವಿದ್ಯಾ ಸಂಸ್ಥೆಗಳ ಕೊರತೆ ಮುಂತಾದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳೇ ದೇಶದ ಅಭಿವೃದ್ಧಿಗೆ ದೊಡ್ಡ ಸಮಸ್ಯೆಗಳಾಗಿ ಮಾರ್ಪಾಡಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ 35 ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಹಾಗೂ ಮರಿಯಾನೊ ರೋಜಸ್ ಮತ್ತು ಶ್ರೀಲಂಕಾದ ಸಂಪನ್ಮೂಲ ವ್ಯಕ್ತಿ ನಳಿನಿ ರತ್ನರಾಜ್ ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ.ರತ್ನಾವತಿ.ಕೆ., ಪ್ರಾಧ್ಯಾಪಕ ಡಾ.ಭಾನುಪ್ರಕಾಶ್ ಬಿ.ಇ., ಗುರುರಾಜ್, ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್. ಮತ್ತಿತರರು ಉಪಸ್ಥಿತರಿದ್ದರು.

ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗ ಮುಖ್ಯಸ್ಥ, ವಿಚಾರ ಸಂಕಿರಣದ ಸಂಚಾಲಕ ಡಾ. ಗಣರಾಜ್ ಕೆ. ಸ್ವಾಗತಿಸಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿಯರಾದ ಫಾತಿಮಾ ಸಫೀರಾ ಮತ್ತು ದೀಕ್ಷಿತಾ ಕುಮಾರಿ ನಿರೂಪಿಸಿದರು. ಕ್ಷಿತಿ ರೈ ಮತ್ತು ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ನಿಕಾಯದ ಡೀನ್, ವ್ಯವಹಾರ ಆಡಳಿತ ವಿಭಾಗ ವಿಭಾಗ ಮುಖ್ಯಸ್ಥೆ ಡಾ.ಶಕುಂತಲಾ ವಂದಿಸಿದರು.

RELATED ARTICLES
- Advertisment -
Google search engine

Most Popular