ಬೆಂಗಳೂರು : ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ. ಇಲ್ಲವಾದರೆ ಅತಿ ಶೀಘ್ರದಲ್ಲೇ ಕರ್ನಾಟಕ ಜನತೆ ನಿಮಗೆ ಮತ್ತು ನಿಮ್ಮ ಕಾಂಗ್ರೆಸ್‌ಗೆ ಅಡ್ರೆಸ್ ಸಿಗದ ಪರಿಸ್ಥಿತಿಗೆ ತಳ್ಳಿಸಿಕೊಳ್ಳುವ ಭಾಗ್ಯ ನಿಮಗೆ ಗ್ಯಾರಂಟಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿಎಂ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿನ ಬಿಟ್ಟು ದಿನ ದೈನ್ಯಸ್ಥಿತಿಯಲ್ಲಿ ದೆಹಲಿಗೆ ಅಲೆಯುತ್ತಿದ್ದಾರೆ. ಮೊದಲು ನೀವು, ಉಪಮುಖ್ಯಮಂತ್ರಿ ಸೇರಿ ರಾಹುಲ್ ಗಾಂಧಿಯವರು ಎಲ್ಲಿದ್ದಾರೋ ಹುಡುಕಿಕೊಳ್ಳಿ. ಆ ಸ್ಥಾನದ ಕಗ್ಗಂಟನ್ನು ಬಿಡಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೆ ಮಾನ್ಯ ಸಿದ್ದರಾಮಯ್ಯ ಅವರೇ, ಪ್ರಧಾನಿ ನರೇಂದ್ರ ಮೋದಿ ಜೀ ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ, ಸಂಸತ್ ಭವನದಲ್ಲೇ ಇದ್ದರು. ರಾಜ್ಯಸಭೆಯಲ್ಲಿ ನಿಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳ ನಡವಳಿಕೆ, ಧೋರಣೆಗಳನ್ನು ಬಯಲಿಗೆಳೆದು ದಿಟ್ಟತನದಿಂದ ಮಾತನಾಡಿದರು. ಇದೇ ವೇಳೆ ಲೋಕಸಭೆಯಲ್ಲಿ ನಿಮ್ಮ ಪಕ್ಷದ ಸದಸ್ಯರು ನಡೆಸಿದ ಅಸಂಸದೀಯ ನಡವಳಿಕೆ ಹಾಗೂ ಕುಚೇಷ್ಟೆಗಳ ಕುರಿತು ಮಾತನಾಡಿದರು. ವಾಸ್ತವವಾಗಿ ತಪ್ಪಿಸಿಕೊಳ್ಳುವ ಸಂಸ್ಕೃತಿ ಇದ್ದರೆ ಅದು ನಿಮ್ಮ ಕಾಂಗ್ರೆಸ್‌ನ ನೆಲೆಯಿಂದ ಉದ್ಭವಿಸಿದ್ದು. ಇದಕ್ಕೆ ಸಾಕ್ಷಿಯಾಗಿ ನಿಮ್ಮ ರಾಹುಲ್ ಅವರೇ ನಮ್ಮ ಕಣ್ಣ ಮುಂದೆ ಇದ್ದಾರೆ.
ಇನ್ನೂ ಕರ್ನಾಟಕದಲ್ಲಿ ನಿಮ್ಮ ಆಡಳಿತದ ಪ್ರತಿಫಲವೆಂಬಂತೆ ಅರಾಜಕತೆ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಪದವಿಯ ಸುತ್ತ ಕಳೆದ ಒಂದು ವರ್ಷದಿಂದಲೂ ದೊಂಬರಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಭ್ರಷ್ಟಾಚಾರ, ಕಮಿಷನ್ ದಂಧೆ ತಾಂಡವವಾಡುತ್ತಿದ್ದು, ಜನರ ಗೋಳು ಹೇಳತೀರದಾಗಿದೆ. ಸಮಸ್ಯೆ ಬಗೆಹರಿಸಬೇಕಾದ ನಿಮ್ಮ ಹೈಕಮಾಂಡ್ ರೂವಾರಿ ರಾಹುಲ್ ಗಾಂಧಿಯವರು ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ.
ಅವರನ್ನು ಹುಡುಕಿಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿನ ಬಿಟ್ಟು ದಿನ ದೈನ್ಯಸ್ಥಿತಿಯಲ್ಲಿ ದೆಹಲಿಗೆ ಅಲೆಯುತ್ತಿದ್ದಾರೆ. ಮೊದಲು ನೀವು, ಉಪಮುಖ್ಯಮಂತ್ರಿ ಸೇರಿ ರಾಹುಲ್ ಗಾಂಧಿಯವರು ಎಲ್ಲಿದ್ದಾರೋ ಹುಡುಕಿಕೊಳ್ಳಿ ಎಂದು ಹೇಳಿದ್ದಾರೆ.



