ಮೈಸೂರು : ಬೇಸಿಗೆ ಕಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆ ಆರ್ ಎಸ್, ಕಬಿನಿ ಅಣೆಕಟ್ಟುಗಳಲ್ಲಿ ಇರುವ ನೀರಿನ ಲಭ್ಯತೆಯ ಮಾಹಿತಿಯನ್ನು ಪಡೆದ ಅವರು ಜೂನ್ ಅಂತ್ಯದ ವರೆಗೆ ಅಣೆಕಟ್ಟುಗಳಲ್ಲಿ ಇರುವ ನೀರಿನ ಪ್ರಮಾಣ ಸಾಕಾಗುತ್ತದೆ. ಕಬಿನಿ ಅಣೆಕಟ್ಟಿನಿಂದ ಕುಡಿಯುವ ನೀರಿಗೆ ಅಗತ್ಯವಿದ್ದಾಗ ಕಬಿನಿಯಿಂದ ಚಾನೆಲ್ ಮೂಲಕ ನೀರನ್ನು ಕಾಲ ಕಾಲಕ್ಕೆ ಹರಿಸಿ ಕುಡಿಯುವ ನೀರನ್ನು ಪೂರೈಸುವಂತೆ ಕಬಿನಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರರು ತಾಲ್ಲೂಕು ಮಟ್ಟದಲ್ಲಿ ಪ್ರತಿ ವಾರ ಕುಡಿಯುವ ನೀರಿನ ನಿರ್ವಹಣೆ ಕುರಿತು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಸೇರಿ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.
ಬೇಸಿಗೆ ಕಾಲ ಆರಂಭವಾಗಿದ್ದು, ಕಾಡ್ಗಿಚ್ಚು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೈಗೊಳ್ಳಬೇಕು. ಕಳೆದ ವರ್ಷ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬಾರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಎಸ್ ಯುಕೇಶ್ ಕುಮಾರ್ ಮಾತನಾಡಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಗುರುತಿಸಿಕೊಳ್ಳಿ. ಕುಡಿಯುವ ನೀರಿನ ಸಮಸ್ಯೆ ಉಂಟಾದ ನಂತರ ಕ್ರಮ ವಹಿಸುವ ಬದಲು ಮೊದಲೇ ಕ್ರಮ ವಹಿಸಬೇಕು. ನೀರಿನ ನಲ್ಲಿ ಗಳಿಗೆ ಆಫ್ ಅಂಡ್ ಆನ್ ಕ್ಯಾಪ್ ಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದ ಅವರು ಅಗತ್ಯ ವಿದ್ದರೆ ಕೊಳವೆ ಬಾವಿಗಳನ್ನು ಕೊರೈಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



