ಕೋಲಾರ : ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೋಲಾರ ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಮಂಗಳವಾರ ಭೇಟಿಯಾಗಿದ್ದು, ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಂಸತ್ ಭವನದ ಕಚೇರಿಯಲ್ಲಿ ಚಂದ್ರಬಾಬು ನಾಯ್ಡು ಅವರೊಂದಿಗೆ ಕುಮಾರಸ್ವಾಮಿ ಹಾಗೂ ಮಲ್ಲೇಶ್ ಬಾಬು ಅವರು ಮಾತುಕತೆ ನಡೆಸಿ. ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಮೂರು ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಕೃಷ್ಣಾ ನದಿ ನೀರನ್ನು ಹಂಚಿಕೆ ಮಾಡಿದರೆ, ಜನರಿಗೆ ನೆರವಾಗುತ್ತದೆ ಎಂದು ಮಲ್ಲೇಶ್ ಬಾಬು ಅವರು ನಾಯ್ಡು ಅವರಿಗೆ ವಿವರಿಸಿದ್ದು, ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹಂಚಿಕೆ ಮಾಡಿದರೆ ದೊಡ್ಡ ವರವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಈ ಭಾಗದಲ್ಲಿ ಭೂಗರ್ಭ ಜಲಮಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, 1500 ಅಡಿ ಆಳಕ್ಕೆ ಬೋರ್‌ವೆಲ್ ತೋಡಿದರೂ ನೀರು ಸಿಗದ ಪರಿಸ್ಥಿತಿ ಇದೆ. ಸಿಕ್ಕ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಕೃಷ್ಣಾ ನದಿ ಈ ಜಿಲ್ಲೆಗಳ ಸಮೀಪದಿಂದ ಹರಿಯುವುದರಿಂದ, ಅದರ ನೀರನ್ನು ಹಂಚಿಕೆ ಮಾಡಿದರೆ ದಶಕಗಳಿಂದ ನೀರಿನ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಪರಿಹಾರ ದೊರೆಯಲಿದೆ ಎಂದು ಕುಮಾರಸ್ವಾಮಿ ಯವರು ಹೇಳಿದರು.
ಈ ಮನವಿಗೆ ಪ್ರತಿಕ್ರಿಯಿಸಿದ ಚಂದ್ರಬಾಬು ನಾಯ್ಡು, ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹಾಗೂ ಸಮಸ್ಯೆಯ ಬಗ್ಗೆ ತಮಗೂ ಮಾಹಿತಿ ಇರುವುದಾಗಿ ತಿಳಿಸಿದರು.



