ಬೆಂಗಳೂರು : ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ರಾಷ್ಟ್ರವ್ಯಾಪಿ ಬೃಹತ್ ಭಾರತ್ ಬಂದ್ಗೆ ಕರೆ ನೀಡಿದ್ದು, ಈ ಮುಷ್ಕರದಿಂದ ಭಾರತದಾದ್ಯಂತ ಬ್ಯಾಂಕಿಂಗ್, ಸಾರ್ವಜನಿಕ ಸಾರಿಗೆ ಮತ್ತು ಸರ್ಕಾರಿ ಕಚೇರಿಗಳ ಕೆಲಸದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಇಂದು ರಸ್ತೆಗೆ ಇಳಿಯುವ ಮುನ್ನ ಎಚ್ಚರಿಕೆ ವಹಿಸುವುದು ಉತ್ತಮ. ಜೊತೆಗೆ ಭಾರತ್ ಬಂದ್ ಹಿನ್ನೆಲೆ ಕೆಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ, ಕೆಲವೆಡೆ ಯಾವುದೇ ರಜೆ ನೀಡಿಲ್ಲ. ಹೀಗಾಗಿ ಎಲ್ಲೆಲ್ಲಿ ಶಾಲೆ-ಕಾಲೇಜಿಗೆ ರಜೆ ಇರಲಿದೆ ಎಂದು ತಿಳಿಯುವುದು ಉತ್ತಮ.
ಇನ್ನೂ ಈ ಪ್ರತಿಭಟನೆಯಲ್ಲಿ INTUC, AITUC, HMS, CITU, AIUTUC, TUCC, SEWA, AICCTU, LPF, ಮತ್ತು UTUC – ಎಂಬ 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಪ್ರತಿಭಟನೆಯ ನೇತೃತ್ವ ವಹಿಸಲಿದ್ದು, ಹಲವು ರಾಜ್ಯಗಳಲ್ಲಿ ಪ್ರತಿಭಟನಾಕಾರರು ರಸ್ತೆಗಿಳಿದು ಹೋರಾಟದ ಮಾಡುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಸಂಭವವಿದ್ದು. ಈ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳು ರಜೆ ಘೋಷಣೆ ಮಾಡಲಾಗಿದೆ.
ದೆಹಲಿ, ಪಂಜಾಬ್, ತಮಿಳುನಾಡು, ಹರಿಯಾಣ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ಕೇರಳ ರಾಜ್ಯಗಳಲ್ಲಿ ಬಹುತೇಕ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.
ಭಾರತ್ ಬಂದ್ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಬಹುದು. ಹಲವೆಡೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದು, ಸಂಚಾರದಲ್ಲೂ ಅಸ್ತವ್ಯಸ್ತ ಉಂಟಾಗುವ ಸಾಧ್ಯತೆ ಇದೆ. ಆದರೆ ಕರ್ನಾಟಕದಲ್ಲಿ ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.
ಯಾವ ಸೇವೆಗಳು ಲಭ್ಯವಿರುವುದಿಲ್ಲ? :
- ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು: ಸಾರ್ವಜನಿಕ ವಲಯದ ಬ್ಯಾಂಕ್ಗಳ ಕಾರ್ಯಾಚರಣೆಗಳ ಮೇಲೆ ಈ ಮುಷ್ಕರ ಭಾರಿ ಪರಿಣಾಮ ಬೀರಲಿದೆ. ಆದ್ದರಿಂದ ಬಹುತೇಕ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಶಾಖೆಗಳಲ್ಲಿನ ನಗದು ವಹಿವಾಟು, ಚೆಕ್ ಕ್ಲಿಯರೆನ್ಸ್ ಮುಂತಾದ ಸೇವೆಗಳಲ್ಲಿ ಭಾರಿ ವಿಳಂಬವಾಗಬಹುದು. ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ, ಪಿಎನ್ಬಿ ಸೇರಿದಂತೆ ಹಲವು ಪ್ರಮುಖ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಸೇವೆ ವ್ಯತ್ಯಯವಾಗುವ ಬಗ್ಗೆ ಮುಂಚಿತವಾಗಿಯೇ ಮುನ್ಸೂಚನೆ ನೀಡಿವೆ ಎನ್ನಲಾಗಿದೆ.
- ಸಾರಿಗೆ ಸಂಪರ್ಕ ಮತ್ತು ಮಾರುಕಟ್ಟೆಗಳು: ದೇಶಾದ್ಯಂತ ಏಕರೂಪದ ಸಾರಿಗೆ ಬಂದ್ ಕಡ್ಡಾಯವಿಲ್ಲದಿದ್ದರೂ, ಕರ್ನಾಟಕದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
- ಶಾಲಾ-ಕಾಲೇಜುಗಳು: ಶಾಲಾ-ಕಾಲೇಜುಗಳಿಗೆ ರಾಷ್ಟ್ರವ್ಯಾಪಿ ಅಧಿಕೃತ ರಜೆ ಘೋಷಣೆಯಾಗಿಲ್ಲ. ಆದರೆ, ಸಾರಿಗೆ ಸಂಪರ್ಕ ಕಡಿತಗೊಂಡರೆ ಅಥವಾ ಪ್ರತಿಭಟನೆ ತೀವ್ರಗೊಂಡರೆ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಅಥವಾ ಸ್ಥಳೀಯ ಜಿಲ್ಲಾಡಳಿತಗಳು ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ಸಾಧ್ಯತೆಯಿದೆ.
ಸಾರ್ವಜನಿಕರಿಗೆ ಸಿಗುವ ಸೇವೆಗಳೇನು?
- ಜನಸಾಮಾನ್ಯರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಸ್ಪತ್ರೆಗಳು, ಕ್ಲಿನಿಕ್ಗಳು, ಆಂಬ್ಯುಲೆನ್ಸ್ ಸೇವೆಗಳು, ಮೆಡಿಕಲ್ ಶಾಪ್, ಅಗ್ನಿಶಾಮಕ ದಳ, ಹಾಲು ಪೂರೈಕೆ ಮತ್ತು ಪತ್ರಿಕೆ ವಿತರಣೆಯಂತಹ ಅತ್ಯಗತ್ಯ ಸೇವೆಗಳು ಎಂದಿನಂತೆ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲಿವೆ. ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.
- ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ವಿಮಾನಯಾನ ಸೇವೆಗಳು, ಮೆಟ್ರೋ ರೈಲು ಸೇವೆಗಳು ಹಾಗೂ ಭಾರತೀಯ ರೈಲ್ವೆ ಸೇವೆಗಳು ಸಾಮಾನ್ಯ ಸ್ಥಿತಿಯಲ್ಲಿರುತ್ತವೆ.
- ಬ್ಯಾಂಕ್ ಶಾಖೆಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡರೂ ಸಹ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ (UPI) ವಹಿವಾಟುಗಳು ಮತ್ತು ಎಟಿಎಂ (ATM) ಸೇವೆಗಳು ತಡೆಯಿಲ್ಲದೆ ಕಾರ್ಯನಿರ್ವಹಿಸಲಿವೆ.
- ಓಲಾ (Ola), ಉಬರ್ (Uber) ನಂತಹ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳು ಲಭ್ಯವಿರಲಿವೆ. ಸಾರ್ವಜನಿಕ ಸಾರಿಗೆ ಬಸ್ಗಳ ಸಂಚಾರ ವ್ಯತ್ಯಯಗೊಂಡರೆ ಈ ಕ್ಯಾಬ್ಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.



