ಗುಂಡ್ಲುಪೇಟೆ: ಮಕ್ಕಳು ಕಲಿಕೆ ಕಡೆ ಹೆಚ್ಚು ಗಮನ ನೀಡಿದರೆ ಮನಸ್ಸು ಬೇರೆಡೆ ಹೋಗುವುದಿಲ್ಲ. ಆದ್ದರಿಂದ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿ ಸಾಹಿತಿ ಕಾಳಿಂಗಸ್ವಾಮಿ ಸಿದ್ಧಾರ್ಥ್ ಸಲಹೆ ನೀಡಿದರು.
ತಾಲೂಕಿನ ಕೊಡಸೋಗೆ ಗ್ರಾಮದ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲಾಕ್ ಸೊಸೈಟಿ ಹಾಗೂ ಗೌತಮ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ಬಾಲ್ಯ ವಿವಾಹ ಬಾಲ ಕಾರ್ಮಿಕ ಪದ್ದತಿ, ಪೋಕ್ಸೋ ಕಾಯ್ದೆ ಹಾಗೂ ಹದಿಹರೆಯದ ಮಕ್ಕಳ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಪ್ರತಿನಿತ್ಯ ಹೊಸದನ್ನು ಕಲಿಯುವ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಇದಕ್ಕೆ ಪ್ರೌಢಶಾಲೆ ಹಂತವು ಪೂರಕವಾಗಿದ್ದು, ಈ ಮೂರು ವರ್ಷದಲ್ಲಿ ಮೈಗೂಡಿಸಿಕೊಂಡ ಶಿಸ್ತು ನಿಮ್ಮನ್ನು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವಂತೆ ಮಾಡುತ್ತದೆ. ಜೊತೆಗೆ ಸಮಾಜಕ್ಕೂ ಕೂಡ ಒಳ್ಳೆಯ ಸಂದೇಶ ನೀಡಬಹುದು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಲ್ಪ ಮಾತನಾಡಿ, ಹದಿಹರೆಯದ ಸಮಯ ಹೆಣ್ಣು ಮಕ್ಕಳು ಆರೋಗ್ಯ ವೃದ್ಧಿಗೆ ಹೆಚ್ಚು ಗಮನ ವಹಿಸಬೇಕು. ಸರಿಯಾದ ಸಮಯಕ್ಕೆ ಆಹಾರ, ವಿಶ್ರಾಂತಿ ಪಡೆಯಬೇಕು. ಋತು ಚಕ್ರದ ಸಂದರ್ಭದಲ್ಲಿ ಬಳಸಿದ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ದೇಹದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಶಿಕ್ಷಕ ಗುರುಮಲ್ಲಪ್ಪ ಮಾತನಾಡಿ, ವಿದ್ಯಾರ್ಥಿಗಳು ಪ್ರೌಢಾವಸ್ಥೆಯಲ್ಲಿ ಕಲಿಕೆ, ಬೋರ್ಡ್‍ಗಳಿಗೆ ಅಂಟಿಕೊಳ್ಳದೆ ಕಲಿಕೇತರ ಚಟುವಟಿಕೆಗಳ ಕಡೆಗೂ ಗಮನ ಕೊಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಶಿವಯ್ಯ, ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲಾಕ್ ಸೊಸೈಟಿ ಅಧ್ಯಕ್ಷೆ ದ್ರಾಕ್ಷಾಯಿಣಮ್ಮ, ಸಂಯೋಜಕರಾದ ಗುರುಮಲ್ಲಮ್ಮ, ಸಾವಿತ್ರಮ್ಮ, ಶಿವಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.