ಹಾವೇರಿ : 2023ರ ಮೇ 20ರಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಶುಕ್ರವಾರ 1000 ದಿನಗಳನ್ನು ಪೂರೈಸಲಿದ್ದು, ಈ ಹಿನ್ನೆಲೆ ನಾಳೆ ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ವೇಳೆ ‘ಭೂ ಗ್ಯಾರಂಟಿ’ ಯೋಜನೆಯಡಿ 1.10 ಲಕ್ಷ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.
ಹಾವೇರಿಯಲ್ಲಿ ಫೆ.14ರಂದು ಭೂ ಗ್ಯಾರಂಟಿ ಯೋಜನೆಯ ಸಮರ್ಪಣಾ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹಾವೇರಿ ಸೇರಿದಂತೆ ಸುತ್ತಲ 8 ಜಿಲ್ಲೆಗಳ ಸುಮಾರು 1.10 ಲಕ್ಷ ಜನರಿಗೆ ಭೂಮಿಯ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸರಕಾರದ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ.
ಇನ್ನೂ ದಾಖಲೆ ರಹಿತ ವಸತಿ ಪ್ರದೇಶಗಳಲ್ಲಿ ಬಡ ಜನರಿಗೆ ಭೂ ಮಾಲೀಕತ್ವ ಖಚಿತಪಡಿಸುವ ಉದ್ದೇಶಕ್ಕೆ ಭೂ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಸರಕಾರ ಆರು ವರ್ಷಗಳಲ್ಲಿ 1 ಲಕ್ಷ ಹಕ್ಕುಪತ್ರ ವಿತರಿಸಿದ್ದು, ನಮ್ಮ ಸರಕಾರ ಎರಡೂವರೆ ವರ್ಷದಲ್ಲೇ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಮುಂದುವರಿದಿರುವ 49 ಲಕ್ಷ ಜಮೀನುಗಳನ್ನು ಗುರುತಿಸಿ ಅವುಗಳ ಮಾಲೀಕತ್ವವನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಿ ಪಹಣಿ ವರ್ಗಾಯಿಸಲಾಗಿದೆ.
ಹಳೆ ಭೂ ದಾಖಲೆಗಳ ನಕಲಿ ತಡೆಗಟ್ಟಲು ಭೂಸುರಕ್ಷಾ ಯೋಜನೆಯಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ಹೇಳಿದ್ದಾರೆ.



