Monday, April 21, 2025
Google search engine

Homeಸ್ಥಳೀಯಪ್ಲಾಸ್ಟಿಕ್ ಬಳಕೆ ಪ್ರಮಾಣ ತಗ್ಗಿಸಬೇಕು: ಯದುವೀರ್

ಪ್ಲಾಸ್ಟಿಕ್ ಬಳಕೆ ಪ್ರಮಾಣ ತಗ್ಗಿಸಬೇಕು: ಯದುವೀರ್

ಮೈಸೂರು: ಪ್ಲಾಸ್ಟಿಕ್ ತ್ಯಾಜ್ಯ ಮಣ್ಣು, ನದಿ ಹಾಗೂ ಪರಿಸರ ಸೇರಿ ಭೂಮಿ ಹಾಗೂ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಇದರ ನೇರ ಪರಿಣಾಮ ಜೀವ ಸಂಕುಲದ ಮೇಲೆ ಆಗುತ್ತಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಳವಳ ವ್ಯಕ್ತಪಡಿಸಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಶುಕ್ರವಾರ ಇಂಡಿಯನ್ ಪಲ್ಪ್ ಆಂಡ್ ಪೇಪರ್ ಟೆಕ್ನಿಕಲ್ ಅಸೋಸಿಯೇಷನ್(ಇಪ್ಟಾ) ಹಾಗೂ ಸಿಎಫ್‌ಟಿಆರ್‌ಐ ವತಿಯಿಂದ ಆಹಾರದ ಪ್ಯಾಕೇಜಿಂಗ್‌ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬದಲು ಕಾಗದ ಬಳಕೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಮಣ್ಣಿನ ಆರೋಗ್ಯ ಹದಗೆಡಿಸುತ್ತಿದೆ. ಇದರಿಂದ ನಾವು ಸೇವಿಸುವ ಆಹಾರದಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಲು ಸಾಧ್ಯವಾಗದಿದ್ದರೂ ಬಳಕೆ ಪ್ರಮಾಣ ಕಡಿಮೆ ಮಾಡಿ ಪರಿಸರ ಉಳಿವಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಆಲೋಚನೆ ಬದಲಾವಣೆಯಿಂದ ಸಾಧನೆ: ಕಾರ್ಯ ಸ್ಥಳದಲ್ಲಿ ಆವಿಷ್ಕಾರದ ಉತ್ತೇಜನ ವಿಷಯದ ಕುರಿತು ಮಾತನಾಡಿದ ಅಮೇಜಾನ್ ಕಂಪನಿಯ ಭಾರತದ ಡಿಇಐ ಲೀಡರ್ ತನುಜಾ ಅಬ್ಬುರಿ, ನಾವು ಮಾಡುವ ಆಲೋಚನೆಗಳಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಂಡರೆ ಬದುಕಿನಲ್ಲಿ ಹಲವು ಸಾಧನೆ ಸಾಧಿಸಬಹುದು. ಯಾವುದೇ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ಬದಲು ಸಮಸ್ಯೆಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಂಡು ಅದಕ್ಕೆ ಶಾಶ್ವತ ಪರಿಹಾರ ರೂಪಿಸುವುದು ಅವಶ್ಯಕ. ಸಮಸ್ಯೆಗೆ ತಕ್ಷಣದ ಪರಿಹಾರದ ಬದಲು ದೀರ್ಘಕಾಲದ ಪರಿಹಾರದ ಅವಶ್ಯಕತೆ ಇದ್ದು, ಇದಕ್ಕೆ ಹೊಸ ದೃಷ್ಟಿಕೋನ ಅವಶ್ಯಕ ಎಂದು ಹೇಳಿದರು.
ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ರೈಲು ಹಳಿಗಳನ್ನು ದಾಟುವ ಸಂದರ್ಭ ಸಾಕಷ್ಟು ಅಪಘಾತಗಳು ಸಂಭವಿಸುತ್ತಿತ್ತು. ದಿನಕ್ಕೆ ಕನಿಷ್ಠ ೮-೧೦ ಜನರು ಸಾವಿಗೀಡಾಗುತ್ತಿದ್ದರು. ಸಾವಿನ ಭಯ ಇದ್ದರೂ ಜನರು ಹಳಿಗಳನ್ನು ದಾಟುತ್ತಿದ್ದರು. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೆ ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬಹುದಿತ್ತು. ಆದರೆ, ಈ ಸಮಸ್ಯೆ ಪರಿಹರಿಸಲು ಅಧ್ಯಯನ ಕೈಗೊಂಡ ಸಂಸ್ಥೆ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡದೆಯೇ ಸಾವಿನ ಪ್ರಮಾಣ ತಗ್ಗಿಸುವಲ್ಲಿ ಯಶಸ್ವಿಯಾಯಿತು. ರೈಲ್ವೆ ಹಳಿಗಳ ಮೇಲೆ ಜೀಬ್ರಾ ಕ್ರಾಸ್ ಮಾದರಿಯಲ್ಲಿ ಹಳದಿ ಪಟ್ಟಿಯನ್ನು ನಿರ್ದಿಷ್ಟ ಅಡಿಗಳ ಅಂತರದಲ್ಲಿ ಬಳಿಯಲಾಯಿತು. ಹೀಗಾಗಿ ಜನರಿಗೆ ರೈಲು ಎಷ್ಟು ದೂರದಲ್ಲಿ ಬರುತ್ತಿದೆ, ಎಷ್ಟು ವೇಗದಲ್ಲಿ ಬರುತ್ತಿದೆ ಎಂದು ಹಳದಿಪಟ್ಟಿಯಿಂದ ಅಂದಾಜಿಸಲು ಸಾಧ್ಯವಾಯಿತು. ಹೀಗಾಗಿ ಸಾವಿನ ಪ್ರಮಾಣ ಶೇ.೭೫ ರಷ್ಟು ತಗ್ಗಿದೆ. ಈ ರೀತಿ ನಾವು ಹೊಸ ದೃಷ್ಟಿಕೋನದಲ್ಲಿ ಆಲೋಚನೆ ಮಾಡಲು ಸಾಧ್ಯವಾದರೆ ಸಮಸ್ಯೆಗೆ ಉತ್ತಮ ಪರಿಹಾರವನ್ನೇ ಪಡೆದುಕೊಳ್ಳಬಹುದು ಎಂದರು.
ಹಲವರಿಗೆ ಹಲವು ಕಡೆಗಳಲ್ಲಿ ಸ್ಫೂರ್ತಿ ದೊರೆಯುತ್ತದೆ. ಆ ಸ್ಫೂರ್ತಿಹಿಂದ ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು. ನೀವು ಕೈಗೊಳ್ಳುವ ಆವಿಷ್ಕಾರದ ಫಲಿತಾಂಶ ತಕ್ಷಣ ದೊರೆಯಬೇಕೆಂದೇನು ಇಲ್ಲ. ಹಲವಾರು ಬಾರಿ ಸೋಲುಗಳು ಉಂಟಾಗಬಹುದು. ಎಷ್ಟೇ ಸೋಲು ಎದುರಾದರೂ ಮತ್ತೆ ಪ್ರಯತ್ನ ಮುಂದುವರೆಸಿದರೆ ಅಂತಿಮವಾಗಿ ಗೆಲುವು ನಿಶ್ಚಿತ. ವ್ಯಾಕ್ಯೂಮ್ ಕ್ಲೀನರ್ ಕಂಪನಿಯೊಂದು ವ್ಯಾಕ್ಯೂಮ್ ಕ್ಲೀನರ್‌ನ ಡಿಸೈನ್ ಸಿದ್ಧಪಡಿಸಲು ಬರೋಬ್ಬರಿ ೫,೧೨೬ ಬಾರಿ ಪ್ರಯತ್ನ ನಡೆಸಿತು. ೫,೧೨೫ ಬಾರಿ ರೂಪಿಸಿದ ಡಿಸೈನ್‌ಗಳನ್ನು ಆ ಕಂಪನಿ ತಿರಸ್ಕರಿಸಿ ೫,೧೨೬ ತಯಾರಿಸಿದ ಅತ್ಯುತ್ತಮ ಡಿಸೈನ್‌ಅನ್ನು ಆಯ್ಕೆ ಮಾಡಿಕೊಂಡು ಮಾರುಕಟ್ಟೆಯಲ್ಲಿ ಯಶಸ್ಸು ಕಂಡಿತು ಎಂದರು.
ಕಾರ್ಯಕ್ರಮದಲ್ಲಿ ಇಪ್ಟಾ ಅಧ್ಯಕ್ಷ ಗಣೇಶ್ ಭಡ್ತಿ, ಕಾರ್ಯದರ್ಶಿ ಎಂ.ಕೆ.ಗೋಯಲ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರೊ.ರಾಜೇಶ್ವರ್ ಎಸ್.ಮಾಚೆ ಹಾಜರಿದ್ದರು.

RELATED ARTICLES
- Advertisment -
Google search engine

Most Popular