Monday, February 16, 2026
Google search engine

Homeರಾಜಕೀಯಕಾಂಗ್ರೆಸ್ ಕುರ್ಚಿ ಕದನ ಮಧ್ಯೆ ಶಾಸಕರ ವಿದೇಶ ಯಾತ್ರೆ

ಕಾಂಗ್ರೆಸ್ ಕುರ್ಚಿ ಕದನ ಮಧ್ಯೆ ಶಾಸಕರ ವಿದೇಶ ಯಾತ್ರೆ

ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ, ಅದರಲ್ಲೂ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಸಂಘರ್ಷ ತೀವ್ರವಾಗಿರುವ ನಡುವೆಯೇ, ಸಮಾನ ಮನಸ್ಕ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ತೀರ್ಮಾನಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಪ್ರವಾಸಕ್ಕೆ ಹೋಗುವವರಲ್ಲಿ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂಬುದು ತಿಳಿದುಬಂದಿದೆ.

ವೀಸಾ ಸಿಗದ ಕಾರಣ ಕೆಲ ಶಾಸಕರು ಪ್ರವಾಸವನ್ನು ರದ್ದು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ವಿವಿಧ ಕಾರಣಗಳನ್ನು ನೀಡಿ ಈ ಪ್ರವಾಸದಿಂದ ದೂರ ಉಳಿದಿದ್ದಾರೆ. ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಆತಂಕವೂ ಕೆಲವರ ನಿರ್ಧಾರಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕಾಂಗ್ರೆಸ್ ​ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.

ಕೆಲ ಶಾಸಕರು ಹೋಗುವುದೋ ಬೇಡವೋ ಎಂಬ ಅಂತಿಮ ನಿರ್ಧಾರವನ್ನು ಇಂದು ಕೈಗೊಳ್ಳಲಿದ್ದು, ಕುಟುಂಬ ಸಹಿತ ಟಿಕೆಟ್ ಬುಕ್ ಮಾಡಿರುವವರು ಪ್ರವಾಸ ರದ್ದುಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಗುರಿಯಾಗಬೇಕಾಗಬಹುದು ಎಂಬ ಕಾರಣದಿಂದ ಅವರು ಪ್ರಯಾಣ ಮುಂದುವರಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಒಬ್ಬರೇ ಟಿಕೆಟ್ ಬುಕ್ ಮಾಡಿದ್ದ ಕೆಲವರು ತಮ್ಮ ಪ್ರಯಾಣವನ್ನು ಈಗಾಗಲೇ ರದ್ದುಪಡಿಸಿದ್ದಾರೆ.

ಈ ಎಲ್ಲ ಗೊಂದಲಗಳ ನಡುವೆಯೇ ಮಂಗಳವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಆಸ್ಟ್ರೇಲಿಯಾ ಕಡೆ ಶಾಸಕರ ಪ್ರಯಾಣ ನಿಗದಿಯಾಗಿದೆ. ಮಾರ್ಚ್ 1ರಂದು ಅವರು ವಾಪಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಕಾಂಗ್ರೆಸ್ ಕುರ್ಚಿ ಗುದ್ದಾಟ ತೀವ್ರಗೊಳ್ಳುವ ಸುಳಿವು ಗೋಚರಿಸಿದೆ. ಭಾನುವಾರವಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಿನ್ನಾಭಿಪ್ರಾಯ ಬೇಡ. ಹೊಂದಾಣಿಕೆಯ ಮೂಲಕ ಮುಂದುವರಿದರೆ ಒಳ್ಳೆಯದು ಎಂದು ರಾಜ್ಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ. ಆದರೆ, ಪೂರ್ಣಾವಧಿ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಎಂಎಲ್​ಸಿ ಯತೀಂದ್ರ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ಬಣದ ಶಾಸಕರ ಕೌಂಟರ್ ಮುಂದುವರಿದಿದೆ. ಡಿಕೆಶಿ ಸಿಎಂ ಆಗಲೇಬೇಕು. ಅವರಿಗೆ ಯಾವಾಗ ಏನು ಮಾಡಬೇಕು ಎಂಬುದು ಚೆನ್ನಾಗಿಯೇ ಗೊತ್ತಿದೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಕುರ್ಚಿ ಗುದ್ದಾಟ ಹಾಗೂ ಒಳರಾಜಕೀಯ ಗೊಂದಲಗಳು ತೀವ್ರವಾಗಿರುವ ಸಂದರ್ಭದಲ್ಲೇ ಶಾಸಕರು ವಿದೇಶ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಸದ್ಯ ಇದನ್ನು ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.

RELATED ARTICLES
- Advertisment -
Google search engine

Most Popular