ಮೈಸೂರು: ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಯೋಜನೆಯಡಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ೧೫ ನಿಲ್ದಾಣಗಳು ಅಭಿವೃದ್ಧಿಯಾಗಲಿವೆ. ಈ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಉನ್ನತೀಕರಣ ಮತ್ತು ಆಧುನೀಕರಣ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಅರಸೀಕೆರೆ, ಹರಿಹರ ನಿಲ್ದಾಣಗಳ ಕಾಮಗಾರಿಗೆ ಆ.೬ರಂದು ಬೆಳಗ್ಗೆ ೧೧ ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ನೈರುತ್ಯ ರೈಲ್ವೆ ವಿಭಾಗದ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೌಚಾಲಯ, ಲಿಫ್ಟ್, ಎಸ್ಕಲೇಟರ್‌ಗಳಂತಹ ಸೌಲಭ್ಯ ಒದಗಿಸಲಿದೆ. ಸ್ವಚ್ಛತೆಗೆ ಒತ್ತು, ಉಚಿತ ವೈಫೈ ಸೇವೆ, ಒಂದು ನಿಲ್ದಾಣ ಒಂದು ಉತ್ಪನ್ನಗಳಂತಹ ಯೋಜನೆಗಳ ಮೂಲಕ ಸ್ಥಳೀಯ ಅಗತ್ಯಗಳಿಗುಣವಾಗಿ ಪ್ರಚಾರ ಮಾಡುತ್ತದೆ. ಪ್ರಯಾಣಿಕರಿಗೆ ಮಾಹಿತಿ, ಐಶಾರಾಮಿ ವಿಶ್ರಾಂತಿ ಕೊಠಡಿ, ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಒಟ್ಟಾರೆ ನಿಲ್ದಾಣಗಳ ಅಂದ ಹೆಚ್ಚಿಸುವಂತೆ ಯೋಜನೆ ರೂಪುಗೊಂಡಿದೆ ಎಂದು ತಿಳಿಸಿದರು.
ಅರಸೀಕೆರೆಗೆ ೩೪.೧೩ ಕೋಟಿ, ಹರಿಹರ ನಿಲ್ದಾಣಕ್ಕೆ ೨೫.೨೧ ಕೋಟಿ ರೂ. ದೊರೆತಿದೆ. ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ ೧೫ ನಿಲ್ದಾಣಗಳ ಅಭಿವೃದ್ಧಿಗೆ ಅಂದಾಜು ೩೫೬ ಕೋಟಿ ರೂ. ನೆರವು ದೊರೆತಿದೆ ಎಂದು ವಿವರಿಸಿದರು.
೧೫ ನಿಲ್ದಾಣಗಳ ಅಭಿವೃದ್ಧಿ: ಚಾಮರಾಜನಗರ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಬಂಟ್ವಾಳ, ಹಾಸನ, ತಿಪಟೂರು, ಅರಸೀಕೆರೆ, ಚಿಕ್ಕಮಗಳೂರು, ತಾಳಗುಪ್ಪ, ಸಾಗರ ಜಂಬಗಾರು, ಶಿವಮೊಗ್ಗ ಟೌನ್, ಚಿತ್ರದುರ್ಗ, ದಾವಣಗೆರೆ, ಹರಿಹರ, ರಾಣೆಬೆನ್ನೂರು ನಿಲ್ದಾಣಗಳು ಆಯ್ಕೆಗೊಂಡಿವೆ.
ಅರಸಿಕೆರೆ ನಿಲ್ದಾಣ: ಹೊಸ ನಿಲ್ದಾಣ ಕಟ್ಟಡ, ಪ್ರಯಾಣಿಕ ಸೌಕರ್ಯಗಳ ಸುಧಾರಣೆ, ಗ್ರಾನೈಟ್ ನೆಲಹಾಸು, ಪ್ಲಾಟ್‌ಫಾರ್ಮ್ ಕಾಂಕ್ರಿಟ್ ನೆಲಹಾಸು, ೧೨ ಮೀಟರ್ ಅಗಲದ ಪಾದಚಾರಿ ಮೇಲ್ಸುತುವೆ, ಶೌಚಾಲಯ, ಸಿಸಿಟಿವಿ, ವೈಫೈ, ೬ ಸಾಲುಗಳ ರೈಲುಗಳ ಆಗಮನ, ನಿರ್ಗಮನ, ಲಿಫ್ಟ್, ೨ ಎಸ್ಕಲೇಟರ್‌ಗಳು, ಪ್ರವೇಶ, ನಿರ್ಗಮನ ಕಮಾನು ನಿರ್ಮಾಣ ಸೇರಿದಂತೆ ೧೨ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಹರಿಹರ ನಿಲ್ದಾಣ: ಹೊಸ ಬುಕ್ಕಿಂಗ್ ಕಚೇರಿ, ವಿಶ್ರಾಂತಿ ಕೊಠಡಿ, ಪ್ರಯಾಣಿಕರ ಸೌಕರ್ಯಗಳ ಸುಧಾರಣೆ, ಒಂದು ಬದಿಯಲ್ಲಿ ಮೆಟ್ಟಿಲು, ಇನ್ನೊಂದು ಬದಿಯಲ್ಲಿ ಲಿಫ್ಟ್, ೨ ಎಸ್ಕಲೇಟರ್‌ಗಳು, ಪ್ಲಾಟ್‌ಫಾರ್ಮ್ ಶೌಚಾಲಯ, ಸಿಸಿಟಿವಿ, ವೈಫೈ, ಎಲ್‌ಇಡಿ ಪ್ರದರ್ಶನ ಫಲಕ, ಕೋಚ್ ಮಾರ್ಗದರ್ಶನ ಫಲಕ ಅಳವಡಿಕೆ ಸೇರಿ ೧೨ ಕಾಮಗಾರಿ ನಡೆಸಲಾಗುತ್ತದೆ ಎಂದು ಹೇಳಿದರು.
ಗತಿಶಕ್ತಿ ಚೀಪ್ ಪ್ರಾಜೆಕ್ಟ್ ಮ್ಯಾನೇಜರ್ ವಿಷ್ಣು ಭೂಷಣ್, ನೈರುತ್ಯ ರೈಲ್ವೆ ಉಪ ವಿಭಾಗೀಯ ವ್ಯವಸ್ಥಾಪಕ ಈ.ವಿಜಯಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ಜೆ.ಲೋಹಿತೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.