ನಂಜನಗೂಡು : ದಕ್ಷಿಣಕಾಶಿ ನಂಜನಗೂಡಿನಲ್ಲಿ ಇನ್ನು ಮುಂದೆ ದಿನದಲ್ಲಿ 3 ಬಾರಿ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ.
ಇಲ್ಲಿಯವರೆಗೂ ದೇವಾಲಯದ ದಾಸೋಹ ಭವನದಲ್ಲಿ ಮಧ್ಯಾಹ್ನದ ವೇಳೆ ಮಾತ್ರ ಪ್ರಸಾದ (ಊಟ) ನೀಡಲಾಗುತ್ತಿತ್ತು. ಇನ್ನು ಮುಂದೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
ಮಲೈ ಮಹದೇಶ್ವರ ಬೆಟ್ಟದ ಮಾದರಿಯಲ್ಲೇ ನಂಜುಂಡೇಶ್ವರ ದೇವಾಲಯದಲ್ಲೂ ಸಹ ಊಟದ ವ್ಯವಸ್ಥೆ ಮಾಡಲಾಗಿದ್ದು, ಶಾಸಕ ದರ್ಶನ್ ಧೃವನಾರಾಯಣ್ ದಾಸೋಹಕ್ಕೆ ಚಾಲನೆ ನೀಡಿದರು.
ಶಕ್ತಿ ಯೋಜನೆಯಡಿ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಎಲ್ಲಾ ದಿನವೂ ಕೂಡ ನಂಜುಂಡೇಶ್ವರ ಸ್ವಾಮಿ ಪ್ರಸಾದ ಭಕ್ತರಿಗೆ ದೊರೆಯಲಿದೆ.



