ಚಾಮರಾಜನಗರ : ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸದುದ್ದೇಶದಿಂದ ಚಾಮರಾಜನಗರ ರೋಟರಿ ಸಿಲ್ಕ್‌ಸಿಟಿ ವತಿಯಿಂದ ವಿದ್ಯಾರ್ಥಿನಿಲಯಕ್ಕೆ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಪರಿಕರಗಳನ್ನು ಜಿಲ್ಲಾಧಿಕಾರಿ ಶ್ರೀರೂಪ ಅವರು ವಿತರಣೆ ಮಾಡಿದರು.
ನಗರದ ಎ.ಪಿ.ಎಂ.ಸಿ ಪ್ರವೇಶದ್ವಾರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರ ರೋಟರಿ ಸಿಲ್ಕ್‍ಸಿಟಿ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಕಂಪ್ಯೂಟರ್ ಸಿಸ್ಟಮ್ಸ್, ಕಂಪ್ಯೂಟರ್ ಟೇಬಲ್, ಚೇರ್‌ಗಳನ್ನು ಜಿಲ್ಲಾಧಿಕಾರಿಯವರು ವಿತರಿಸಿದರು.
ಇದೇ ವೇಳೆ ಮಾತನಾಡಿದ ಅವರು ಗಡಿಜಿಲ್ಲೆ ಚಾಮರಾಜನಗರ ಅಭಿವೃದ್ಧಿಯತ್ತ ಸಾಗುತ್ತಿದ್ದು, ರೋಟರಿ ಸಿಲ್ಕ್ ಸಿಟಿ ಸಂಸ್ಥೆಯು ವಿವಿಧ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಜಿಲ್ಲೆಯ ಅಭಿವೃದ್ಧಿ ಸರ್ಕಾರದಿಂದ ಮಾತ್ರವಲ್ಲ, ಅದಕ್ಕೆ ಸಂಘಸಂಸ್ಥೆಗಳ ಸಹಕಾರವು ಅವಶ್ಯವಾಗಿದೆ. ರೋಟರಿ ಸಂಸ್ಥೆಯ ಸಮಾಜಮುಖಿ ಸೇವೆ ಶ್ಲಾಘನೀಯವಾದದ್ದು ಎಂದರಲ್ಲದೆ, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, ಕಳೆದ ಬಾರಿ ಉಪ ಲೋಕಾಯುಕ್ತರು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲು ಸೂಚಿಸಿದ ಮೇರೆಗೆ ವಿದ್ಯಾರ್ಥಿನಿಲಯದಲ್ಲಿ ಸಾಕಷ್ಟು ಮೂಲಸೌಲಭ್ಯಗಳಿಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿನಿಲಯದಲ್ಲಿ ನಿರಂತರವಾಗಿ ಸ್ವಚ್ಚತೆ ಕಾಪಾಡಬೇಕು. ವಿದ್ಯಾರ್ಥಿನಿಲಯದಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ವಿದ್ಯಾರ್ಥಿಗಳು ನೇರವಾಗಿ ಹೇಳಿಕೊಳ್ಳಬಹುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ನಿಮ್ಮ ಕುಂದುಕೊರತೆಗಳಿಗೆ ಸ್ಪಂದಿಸಲಿವೆ ಎಂದು ಹೇಳಿದರು.
ರೋಟರಿ ಸಿಲ್ಕ್‌ಸಿಟಿ ಸಹಾಯಕ ಗೌರ್ನರ್ ಡಿ.ಎಸ್.ಗಿರೀಶ್ ಮಾತನಾಡಿ, ರೋಟರಿ ಸಿಲ್ಕ್‌ಸಿಟಿಯು ಕಳೆದ 2 ವರ್ಷಗಳಿಂದ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಸೇವಾ ಮನೋಭಾವ ಹೊಂದಿರುವ ರೋಟರಿ ಸಂಸ್ಥೆಯು ತನ್ನ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಅರಿತು ಸಮಾಜಸೇವಾ ಕಾರ್ಯದಲ್ಲಿ ತೊಡಗಿದೆ. ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮುನ್ನೆಡೆಯುವಂತೆ ಸಲಹೆ ಮಾಡಿದರು.
ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ಸಮಿತ್ ಕುಮಾರ್ ಮಾತನಾಡಿ, ರೋಟರಿ ವತಿಯಿಂದ ರಕ್ತದಾನ, ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ನಗರದಲ್ಲಿ ಕಳೆದ 2 ವರ್ಷಗಳಿಂದ ಮನರಂಜನೆ ಜೊತೆಗೆ ಆಹಾರ ಮೇಳ ನಡೆಸಲಾಗುತ್ತಿದೆ. ಮೇಳದಿಂದ ಸಂಗ್ರಹಿಸಿದ ನಿಧಿಯನ್ನು ಸಮಾಜ ಸೇವಾ ಕಾರ್ಯಕ್ಕೆ ಮೀಸಲಿಡಲಾಗುತ್ತಿದೆ. ಈ ಪೈಕಿ ವಿದ್ಯಾರ್ಥಿನಿಲಯಕ್ಕೆ ಕಂಪ್ಯೂಟರ್ ಪರಿಕರಗಳ ಕೊಡುಗೆಯು ಒಂದಾಗಿದೆ ಎಂದರು.
ರೋಟರಿ ಸಿಲ್ಕ್‌ಸಿಟಿಯ ಡಿ.ಪಿ.ವಿಶ್ವಾಸ್ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ದಿಗೆ ಜಿಲ್ಲಾಡಳಿತಕ್ಕೆ ನೆರವು ನೀಡುತ್ತಿದೆ. ಕಳೆದ ಬಾರಿಯ ಆಹಾರ ಮೇಳದ ನಿಧಿಯಿಂದ ತಾಲೂಕಿನ ಮೂಕನಪಾಳ್ಯ ಶಾಲಾ ಕಟ್ಟಡ ಅಭಿವೃದ್ದಿಗೊಳಿಸಲಾಗಿದೆ. ಈ ಬಾರಿಯ ಆಹಾರ ಮೇಳದ ನಿಧಿಯನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಶ್ವನಾಥ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು, ಜಿಲ್ಲಾಧಿಕಾರಿ ಕಚೇರಿಯ ಸಿ.ಎಸ್.ಆರ್.ನಿಧಿ ಸಂಯೋಜಕ ಹಾಗೂ ನೀತಿ ಸಲಹೆಗಾರರಾದ ರಕ್ಷಿತಾ, ನಿಲಯಪಾಲಕರಾದ ಸುನೀತ, ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ಪದಾಧಿಕಾರಿಗಳು, ಇತರರು ಇದ್ದರು.
ಕಂಪ್ಯೂಟರ್ ಪರಿಕರಗಳ ವಿತರಣೆ ಬಳಿಕ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಬಾಲಕಿಯರ ವಸತಿ ನಿಲಯದಲ್ಲಿನ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ವಿದ್ಯಾರ್ಥಿನಿಲಯದ ಸ್ವಚ್ಚತೆ, ವಸತಿ ನಿಲಯದ ಕೊಠಡಿಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ವೀಕ್ಷಿಸಿದರು. ಬಳಿಕ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳ ಆರೋಗ್ಯ, ಶಿಕ್ಷಣ ಹಾಗೂ ಅಗತ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.



