Saturday, February 21, 2026
Google search engine

Homeರಾಜ್ಯರೋಗಿಗಳಿಗೆ ತೊಂದರೆ ಇಲ್ಲ ಸ್ಕ್ಯಾನಿಂಗ್ ಸೌಲಭ್ಯ ಔಷಧಿ ಕೊರತೆ ಇಲ್ಲ : ದಿನೇಶ್ ಗುಂಡೂರಾವ್

ರೋಗಿಗಳಿಗೆ ತೊಂದರೆ ಇಲ್ಲ ಸ್ಕ್ಯಾನಿಂಗ್ ಸೌಲಭ್ಯ ಔಷಧಿ ಕೊರತೆ ಇಲ್ಲ : ದಿನೇಶ್ ಗುಂಡೂರಾವ್

ಬೆಂಗಳೂರು: ರೋಗಿಗಳಿಗೆ ತೊಂದರೆ ಆಗದಂತೆ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್‌ಗೆ ಸಮಸ್ಯೆ ಆಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣವನ್ನ ವೈಭವೀಕರಿಸುವ ರೀತಿ ಆಗಿದೆ. 13 ಆಸ್ಪತ್ರೆಗಳಲ್ಲಿ ಇದು ಆಗಿದೆ. 13 ಕಡೆ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ.ಪ್ರೊಸೆಸರ್ ಸಮಸ್ಯೆ ಇವತ್ತು ನಿವಾರಣೆ ಆಗುತ್ತದೆ. ಎಂಆರ್‌ಐ, ಸಿಟಿ ಸ್ಕ್ಯಾನ್‌ಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ಆಗಲ್ಲ ಎಂದರು.

ಕಂಪನಿಯವರು ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ. 140 ಕೋಟಿ ಕೊಡಿ ಅಂತ ಕೇಳುತ್ತಿದ್ದಾರೆ. ಅದು ಕೊಡಲು ಆಗಲ್ಲ. ನಮ್ಮ ಪ್ರಕಾರ 10-15 ಕೋಟಿ ಕೊಡಬೇಕು ಅಷ್ಟೇ. ನ್ಯಾಯಯುತ ಹಣ ಕೊಡುತ್ತೇವೆ. ವಿಪಕ್ಷಗಳ ನಾಯಕರು ಖಾಸಗಿ ಕಂಪನಿಗೆ ಎಷ್ಟು ಬೇಕಾದರೂ ಹಣ ಕೊಡಿ ಅಂತ ಹೇಳೋದು ಸರಿಯಲ್ಲ. ಅಶೋಕ್ ಯಾರ ಪರ ಇದ್ದಾರೆ. ಬಿಜೆಪಿ-ಜೆಡಿಎಸ್ ಯಾರ ಪರ ಇದ್ದಾರೆ ಅಂತ ತಿಳಿಸಲಿ ಎಂದು ಹೇಳಿದರು.

2024ರಲ್ಲಿ ಕೃಷ್ಣ ಡಯಾಗ್ನಸ್ಟಿಕ್ ಅವರು ಸ್ಕ್ಯಾನ್ ಸರಿಯಾಗಿ ಮಾಡುತ್ತಿಲ್ಲ ಎಂದು ಪತ್ತೆ ಹಚ್ಚಿದ್ದೆವು. ಹೀಗಾಗಿ ಹಿಂದಿನ ಸ್ಕ್ಯಾನ್ ಬಗ್ಗೆ ಮಾಹಿತಿ ಕೇಳಿದೆವು, ಅವರು ಕೊಟ್ಟಿಲ್ಲ, ಅದಕ್ಕೆ ನಿಂತಿದೆ. ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ಈಗ ಅವರು ಸ್ಥಗಿತ ಮಾಡಿದ್ದಾರೆ. ನಾವು ಅದನ್ನ ಎದುರಿಸುತ್ತೇವೆ. ಈಗ ನಾವೇ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಮಿಷನ್‌ಗೆ ಟೆಂಡರ್ ಕರೆದಿದ್ದೇವೆ. ಅಂತಿಮ ಹಂತದಲ್ಲಿ ಇದ್ದೇವೆ ಸರ್ಕಾರದ ಹಣ ಪೋಲಾಗಬಾರದು. 2-3 ದಿನ ತೊಂದರೆ ಆಗಿದೆ. ಅದಕ್ಕೆ ಅಲ್ಲೋಲ ಕಲ್ಲೋಲ ಆಗಿದೆ ಅನ್ನೋದು ಬೇಡ. 13 ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಆಗಿದೆ. ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು. 

ಕಂಪನಿ ಅವರು ಕೇಳಿದಷ್ಟು ಹಣ ಕೊಡಲು ಆಗಲ್ಲ. ಆ ಕಂಪನಿಯವರು ಏನು ಮಾಡುತ್ತಾರೆ ನೋಡೋಣ. ಹೊಂದಾಣಿಕೆ ಮಾಡಿಕೊಳ್ಳುತ್ತಾರಾ ಇಲ್ಲವಾ ನೋಡೋಣ. ಸ್ಥಗಿತ ಹಂತಕ್ಕೆ ಹೋಗಿದ್ದಾರೆ. ನಿಯಮ ಪಾಲನೆ ಆಗುತ್ತಿದೆಯಾ ಎಂದು ನಮ್ಮ ಇಲಾಖೆಯವರು ಎಲ್ಲಾ ಕಡೆ ಪರಿಶೀಲನೆ ಮಾಡುತ್ತಿದ್ದಾರೆ. ಜನರ ಪರವಾಗಿ ಕೆಲಸ ಮಾಡೋಕೆ ನಮ್ಮ ಇಲಾಖೆ ದಿಟ್ಟತನ ತೆಗೆದುಕೊಳ್ಳುತ್ತಿದೆ. ಬ್ಲಾಕ್ ಮೇಲ್‌ಗೆ ನಾವು ಬಗ್ಗಲ್ಲ ಎಂದರು. 

ರಾಜ್ಯದಲ್ಲಿ ಔಷಧಿ ಕೊರತೆ ಇದೆ ಎಂಬ ವಿಪಕ್ಷ ನಾಯಕ ಅಶೋಕ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಔಷಧಿ ಕೊರತೆ ಇಲ್ಲ. ಹಣಕಾಸಿನ ಸಮಸ್ಯೆ ಪರಿಹಾರ ಮಾಡಿದ್ದೇವೆ. ಇದೊಂದು ದೊಡ್ಡ ವ್ಯವಸ್ಥೆ. ಕೆಲವು ಆಸ್ಪತ್ರೆಯಲ್ಲಿ ಈ ಸಮಸ್ಯೆ ಮೊದಲಿಂದ ಇದೆ. ಸಮಸ್ಯೆ ಇರೋ ಕಡೆ ಹಣಕಾಸಿನ ಕೊರತೆ ಆಗಿತ್ತು. ಅದನ್ನ ಸರಿ ಮಾಡಿದ್ದೇವೆ ಎಂದು ಹೇಳಿದರು.ಏಪ್ರಿಲ್ ತಿಂಗಳಿಂದ ಮತ್ತಷ್ಟು ಸುಧಾರಣೆ ಆಗಲಿದೆ. ಎಲ್ಲಾ ಆಸ್ಪತ್ರೆಗಳಿಗೆ ದುಡ್ಡು ಕೊಟ್ಟಿದ್ದೇವೆ. ಸ್ಥಳೀಯವಾಗಿ ಔಷಧಿ ಖರೀದಿಗೆ ಅನುಮತಿ ಕೊಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದರು.

RELATED ARTICLES
- Advertisment -
Google search engine

Most Popular