Monday, February 23, 2026
Google search engine

Homeರಾಜಕೀಯಕಾಂಗ್ರೆಸ್‌ನಲ್ಲಿ ಹೊಸ ಪವರ್ ಸೆಂಟರ್ ಚರ್ಚೆ; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಕಣ್ಣು!

ಕಾಂಗ್ರೆಸ್‌ನಲ್ಲಿ ಹೊಸ ಪವರ್ ಸೆಂಟರ್ ಚರ್ಚೆ; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಕಣ್ಣು!

ಬೆಂಗಳೂರು : ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಜೋರಾಗಿರುವ ಸಂದರ್ಭದಲ್ಲೇ ಮತ್ತೊಂದು ಪವರ್ ಸೆಂಟರ್‌ ರೂಪುಗೊಳ್ಳುತ್ತಿದೆಯಾ ಎಂಬ ಅನುಮಾನ ಬಲವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಮತ್ತೊಂದು ಪವರ್ ಸೆಂಟರ್ ರೂಪದಲ್ಲಿ ಮುನ್ನುಗ್ಗುತ್ತಿರುವ ಲಕ್ಷಣ ಕಾಣಿಸಿದೆ. ಹೈಕಮಾಂಡ್ ಮಟ್ಟದಲ್ಲೂ ಬಲ ಪ್ರದರ್ಶನ ಮಾಡಲು ಸತೀಶ್ ಜಾರಕಿಹೊಳಿ ಮುಂದಾಗಿರುವುದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ.

ಅಂತಾರಾಜ್ಯ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಸಜ್ಜು

ಆಪ್ತ ಶಾಸಕರು ಹಾಗೂ ಆಪ್ತ ಡಿಸಿಸಿ ಅಧ್ಯಕ್ಷರೊಂದಿಗೆ ದೆಹಲಿಗೆ ಎರಡು ಬಾರಿ ಭೇಟಿ ನೀಡಿರುವ ಅವರು, ಬಜೆಟ್ ಅಧಿವೇಶನದ ಆಸುಪಾಸಿನಲ್ಲಿ ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ. ಇದಲ್ಲದೆ, ಮತ್ತೊಂದು ಸುತ್ತಿನ ಅಂತಾರಾಜ್ಯ ಪ್ರವಾಸಕ್ಕೂ ಬೆಂಬಲಿಗರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಪ್ರವಾಸಗಳ ಮೂಲಕ ಪರ್ಯಾಯ ನಾಯಕತ್ವದ ಸಂದೇಶ ರವಾನಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣು

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರದಲ್ಲೂ ಸತೀಶ್ ಪ್ರಯತ್ನ ಆರಂಭಿಸಿರುವುದು ಕುತೂಹಲ ಹೆಚ್ಚಿಸಿದೆ. ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಲಿರುವ ಹಿನ್ನೆಲೆ, ರಾಜ್ಯ ರಾಜಕೀಯದಲ್ಲಿ ಸಹಜವಾಗಿ ಚುನಾವಣಾ ವಾತಾವರಣ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪರ್ಯಾಯ ನಾಯಕತ್ವದ ರೂಪರೇಖೆ ಸಿದ್ಧಪಡಿಸುವ ಯತ್ನವೇ ಈ ಚಟುವಟಿಕೆಗಳ ಹಿಂದೆ ಇದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ, ನಾಯಕತ್ವ ಬದಲಾವಣೆ ಗೊಂದಲಗಳ ನಡುವೆ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳತ್ತ ಗಮನಹರಿಸಿದ್ದಾರೆ. ಸ್ವಲ್ಪ ವಿರಾಮದ ನಂತರ ಮತ್ತೆ ಮ್ಯಾರಥಾನ್‌ ಬಜೆಟ್ ಸಭೆಗಳನ್ನು ಆರಂಭಿಸಿರುವ ಅವರು, ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆಡಳಿತ ಪಕ್ಷದ ಪರಿಶಿಷ್ಟ ಪಂಗಡ ಶಾಸಕರು ಮತ್ತು ಮುಖಂಡರು, ದಲಿತ ಸಂಘರ್ಷ ಸಮಿತಿಯ ನಾಯಕರು ಹಾಗೂ ಒಬಿಸಿ ಸಚಿವರು ಮತ್ತು ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುತ್ತಿದೆ.

ಗೃಹ ಕಚೇರಿ ಕೃಷ್ಣದಲ್ಲಿ ನಡೆಯುತ್ತಿರುವ ಈ ಸಭೆಗಳು ಮಾರ್ಚ್ 6ರಂದು ಮಂಡಿಸಲಿರುವ ಐತಿಹಾಸಿಕ ಬಜೆಟ್‌ಗೆ ಪೂರ್ವಭಾವಿ ಸಿದ್ಧತೆ ಎಂದು ತಿಳಿದುಬಂದಿದೆ. ಪಕ್ಷದ ಒಳರಾಜಕೀಯ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ, ಆಡಳಿತ ಕಾರ್ಯಚಟುವಟಿಕೆಗಳತ್ತ ಸಿಎಂ ಗಮನ ಹರಿಸಿರುವುದು ಮತ್ತೊಂದು ರಾಜಕೀಯ ಸಂದೇಶವನ್ನೇ ನೀಡುತ್ತಿದೆ.

RELATED ARTICLES
- Advertisment -
Google search engine

Most Popular