ಬೆಂಗಳೂರು : ರಾಜ್ಯದಲ್ಲಿ ಶಾಲಾ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿರುವುದನ್ನು ತಡೆಯಲು 16 ವರ್ಷದೊಳಗಿನವರಿಗೆ ಮೊಬೈಲ್ ಬಳಕೆ ನಿಷೇಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನೂ ಸರ್ಕಾರದ ಈ ಚಿಂತನೆಗೆ ಶನಿವಾರ(ಫೆ.21) ರಂದು ನಡೆದ ರಾಜ್ಯದ ವಿಶ್ವವಿದ್ಯಾಲಯಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅಭಿಪ್ರಾಯ ಪಡೆದಿದ್ದು ಬಹುತೇಕ ಕುಲಪತಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಇಡೀ ದಿನ ನಡೆದ ಕುಲಪತಿಗಳ ಸಮ್ಮೇಳನದ ಸಮಾರೋಪದ ಸಮಾರಂಭದ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಈಗಾಗಲೇ ಆಸ್ಟ್ರೇಲಿಯಾ, ಯೂರೋಪ್ ನ ಕೆಲ ರಾಷ್ಟ್ರಗಳಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ ಮಾಡಲಾಗಿದ್ದು, ನಮ್ಮ ರಾಜ್ಯದಲ್ಲೂ ಬಹಳಷ್ಟು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಇದರಿಂದ ಅವರು ತರಗತಿ ಓದಿನ ಜೊತೆ ವೈಚಾರಿಕ, ವೈಜ್ಞಾನಿಕ, ಮೌಲ್ಯಾಧಾರಿತ ಶಿಕ್ಷಣದಿಂದ ವಂಚಿತರಾಗಿ ಹಾಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ರಾಜ್ಯದಲ್ಲಿ 16 ವರ್ಷದೊಳಗಿನವರಿಗೆ ಮೊಬೈಲ್ ಬಳಕೆ ನಿಷೇಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ವಿಶ್ವವಿದ್ಯಾಲಯಗಳು ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಮಕ್ಕಳಿಗೆ ಪರಿಚಯಿಸಬೇಕು. ವಿದ್ಯಾರ್ಥಿಗಳನ್ನು ವಿಶ್ವಪ್ರಜೆಯನ್ನಾಗಿಸಲು ಬೇಕಾದ ವೇದಿಕೆಯನ್ನು ಸಿದ್ಧಪಡಿಸಬೇಕು. ಜಾತಿ, ಮತ, ಧರ್ಮ ಮೀರಿ ವೈಜ್ಞಾನಿಕತೆ ಮತ್ತು ವೈಚಾರಿಕೆಯನ್ನು ಬೆಳೆಸಬೇಕು. ಆದರೆ ವಿಶ್ವವಿದ್ಯಾಲಯಗಳು ಜಾತಿಕೂಪಗಳಾಗುತ್ತಿವೆ. ಇದರಿಂದ ಯುವಜನತೆಯನ್ನು ಹೊರ ತರುವ ಕೆಲಸ ಮಾಡಬೇಕು. ಇದಕ್ಕಾಗಿ ಏನು ಮಾಡಬೇಕೆಂಬ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದು ತಿಳಿಸಿದರು.



