ಮಂಡ್ಯ: ಕೆಆರ್ ಎಸ್ ಡ್ಯಾಂನಲ್ಲಿ 113 ಅಡಿಯಷ್ಟು ನೀರು ಇದೆ. ಕುಡಿಯುವ ನೀರು ಹಾಗೂ ಮಳೆಯ ಆತಂಕ ಇದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವ ಕುರಿತು ಈ ವಾರದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೀವಿ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲೆಗೆ ನೀರು ನಿಲ್ಲಿಸಿ ತಮಿಳುನಾಡಿಗೆ ನೀರು ಬಿಟ್ಟಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಒಂದು ವೇಳೆ ಈಗ ನೀರು ಬಿಟ್ಟರೆ, ಮುಂದೆ ಮಳೆ ಬೀಳದಿದ್ರೆ ಆಗ ಬೆಳೆದ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ. ಬೆಳೆದ ಭತ್ತಕ್ಕೆ ತೊಂದರೆ ಆಗುತ್ತಾ ಎಂಬ ಆತಂಕ ಇದೆ ಎಂದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಿ, ನೀರು ಹೇಗೆ ಕೊಡಬೇಕು ಎನ್ನೋದು ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ತಿಂಗಳು 11ರ ಮೇಲೆ ಮಳೆ ಬೀಳುತ್ತೆ ಎಂಬ ವರದಿ ಇದೆ.ಇದೆಲ್ಲಾ ನೋಡಿಕೊಂಡು ತೀರ್ಮಾನ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ತಮಿಳುನಾಡು ಸಿಎಂ ಕೇಂದ್ರಕ್ಕೆ ಹೋಗಿ ಒತ್ತಾಯ ಮಾಡುತ್ತಿದ್ದಾರೆ. ನ್ಯಾಯಾಲಯದ ಹಂಚಿಕೆ ಪ್ರಕಾರ ನೀರು ಕೊಡಿ ಎಂದು ಕೇಳ್ತಾ ಇದ್ದಾರೆ. ನಮ್ಮಲ್ಲೂ ಕುಡಿಯುವ ನೀರು, ವ್ಯವಸಾಯಕ್ಕೆ ಎರಡಕ್ಕೂ ನೀರು ಬೇಕಾಗಿದೆ. ಕಳೆದ 15 ದಿನಗಳಿಂದ ತಮಿಳುನಾಡು ಒತ್ತಡ ಮಾಡುತ್ತಿದೆ. ಈಗಾಗಲೇ ನೀರಾವರಿ ಸಚಿವರು ಹಾಗೂ ಅಧಿಕಾರಿಗಳು ಕೇಂದ್ರಕ್ಕೆ ಮನವರಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದು ಇತಿಹಾಸದಲ್ಲಿ ಬರೆದಿಡುವ ದಿನ. ಜುಲೈ 1 ರಿಂದ ಗೃಹಜ್ಯೋತಿ ಯೋಜನೆಗೆ ಚಾಲನೆ ಕೊಡಲಾಗಿದೆ. ಇವತ್ತು ಅಧಿಕೃತವಾಗಿ ಉದ್ಘಾಟನೆಯಾಗ್ತಿದೆ. ಇವತ್ತು 0 ಬಿಲ್ ಕೊಡ್ತಿದ್ದೇವೆ. ಪ್ರತಿ ತಿಂಗಳು ಸಹ ೦ ಬಿಲ್ ಬರುತ್ತೆ. ನೋಂದಣಿ ಮಾಡಿಕೊಂಡಿರುವ 24 ಲಕ್ಷ ಗ್ರಾಹಕರು ಇದ್ದಾರೆ. 20ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ, ಇನ್ನೂ 4 ಲಕ್ಷ ಜನ ಬಾಕಿ ಇದ್ದಾರೆ. ಹಲವು ಕಾರಣದಿಂದ ನೋಂದಣಿ ಮಾಡಿಕೊಂಡಿಲ್ಲ. ಟೈಮ್ ಇದೆ ನೋಂದಣಿ ಮಾಡಿಕೊಳ್ಳಿ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಲನೆ. ನೀಡಲಾಗುತ್ತಿದ್ದು, ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ಉಚಿತವಾಗಿ ಕರೆಂಟ್ ಉಪಯೋಗಿಸುವ ಯೋಜನೆ ಕೊಟ್ಟಿದೆ. ಜನರಿಗೆ ನಮ್ಮ ಕಾಂಗ್ರೆಸ್ ಯೋಜನೆ ಉಪಯೋಗವಾಗ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ
ಕುಮಾರಸ್ವಾಮಿಯ ವರ್ಗಾವಣೆ ದಂಧೆ ಆರೋಪಕ್ಕೆ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿ ಅವರನ್ನ ಬಿಜೆಪಿ ವಕ್ತಾರರನ್ನಾಗಿ ನೇಮಕ ಮಾಡಿದ್ದಾರೆ. ಬಿಜೆಪಿ ಅವರು ಏನು ಮಾತಾಡುತ್ತಿಲ್ಲ. ಬರಿ ಇವರೇ ಎಲ್ಲಾ ಮಾತನಾಡುತ್ತಾ ಇದ್ದಾರೆ. ಕುಮಾರಸ್ವಾಮಿಗೆ ಮಾತನಾಡಲು ಬಿಜೆಪಿ ಬಿಟ್ಟುಕೊಟ್ಟಿರಬೇಕು ಎಂದು ಕಿಡಿಕಾರಿದರು.
ನಮ್ಮ ಉಚಿತ ಯೋಜನೆಗಳ ಬಗ್ಗೆ ಜನರಿಗೆ ಖುಷಿ ಇದೆ. ಈ ಖುಷಿಯನ್ನು ತಣ್ಣಗೆ ಮಾಡಲು ಕುಮಾರಸ್ವಾಮಿ ಹೀಗೆ ಮಾತಾಡಿತ್ತಾರೆ. ಕುಮಾರಸ್ವಾಮಿ ಸಿಎಂ ಆದಾಗ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಯಾಕೆ ಅಂತಾ ಕೇಳಿದ್ರೆ ಸಮ್ಮಿಶ್ರ ಸರ್ಕಾರ ಅಂತಾ ಹೇಳ್ತಾ ಇದ್ರು.ಆಗ ಸಿಎಂ ಕುರ್ಚಿ ಇದ್ದಿದ್ದು ಒಂದೇ ಇದ್ದಿದ್ದು ಎರಡು ಅಲ್ಲ. ಸೈನ್ ಹಾಕುತ್ತಿದ್ದು ಅವರ ಪೆನ್‌ನಲ್ಲಿಯೇ. ಹಣಕಾಸಿನ ಸಚಿವರು ಅವರೆ ಇದ್ರು. ಇವರು ಕೊಟ್ಟ ಭರವಸೆಗಳನ್ನು ಈಡೇರಿಸಲು ಯಾವುದೇ ತೊಂದರೆ ಇರಲಿಲ್ಲ. ಈಗ ನಾನು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಜೆಡಿಎಸ್ ಬಿಜೆಪಿಗೆ ಲೋಕಸಭೆಗೆ ಏನು ಎಂಬ ಆತಂಕ ಬಂದಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ದಿಕ್ಕುತಪ್ಪಿಸಲು ಹೀಗೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ
ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ಆಗಿವೆ. ಹೀಗೆ ಮಾತಾಡೋದು ಮಾಜಿ ಸಿಎಂ ಆದವರಿಗೆ ಗೌರವ ತರಲ್ಲ. ಈ ರಾಜ್ಯದ ಮುತ್ಸದ್ಧಿ ರಾಜಕಾರಣಿ ದೇವೇಗೌಡರು. ಅವರ ಬಳಿ ಕೇಳಿ ನಿಮ್ಮ ಹೀಗೆ ಹೇಳ್ತಾ ಇದಾರೆ ಅಂತಾ. ದೇವೇಗೌಡರು ಏನಾದ್ರು ಹೇಳಿದ್ರೆ ನಾವು ಹೇಳ್ತೀವಿ. ಈಗಾಗಲೇ ನಾವು ಅನೇಕರಿಗೆ ಉತ್ತರ ಕೊಡದು ಬಿಟ್ಟಿದ್ದೀವಿ, ಈಗ ಕುಮಾರಸ್ವಾಮಿ ಅವರಿವೆ ಉತ್ತರ ಕೊಡುವುದನ್ನುಬಿಟ್ಟು ಬಿಡುತ್ತೇವೆ ಎಂದರು.
ಖಾಸಗಿ ವಿಚಾರ ಚರ್ಚೆಗಳನ್ನು ಈಗ ಹೇಳುವುದು ಸರಿಯಲ್ಲ. ದೇವೇಗೌಡರು ವರ್ಗಾವಣೆ ವಿಚಾರ ತಪ್ಪು ಎಂದ್ರೆ ಒಪ್ಪಿಕೊಳ್ಳುತ್ತೇವೆ ಎಂದು ಟಾಂಗ್ ನೀಡಿದರು.