ರಾಮನಗರ: ನಮ್ಮಲ್ಲಿ ಯಾವ ದಂಧೆಯೂ ಇಲ್ಲ, ಯಾವ ಭ್ರಷ್ಟಾಚಾರವೂ ಇಲ್ಲ. ನಮ್ಮಲ್ಲಿ ಸ್ವಚ್ಛ ಆಡಳಿತ ಇದೆ. ಕುಮಾರಸ್ವಾಮಿ ವಿರೋಧ ಪಕ್ಷದಲ್ಲಿದ್ದಾರೆ. ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡ್ತಿದ್ದಾರೆ ಎಂದು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೆಚ್ ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿಂದು ಪೊಲೀಸ್ ಹಾಗೂ ಸಾರಿಗೆ ಇಲಾಖೆಯಲ್ಲಿ ಸಂಬಳ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಕಾರ್ಯವೈಖರಿ ಇದೆ. ನಮ್ಮ ಕೆಎಸ್ ಆರ್ ಟಿಸಿಯಲ್ಲಿ 1ನೇ ತಾರೀಖು ಸಂಬಳ ನೀಡಲಾಗುತ್ತೆ. ಬಿಎಂಟಿಸಿಯಲ್ಲಿ 7ನೇ ತಾರೀಖು, ಕಲ್ಯಾಣ ಕರ್ನಾಟಕ ಸಾರಿಗೆಗೆ ಒಂದು ದಿನ ನಿಗಧಿ ಮಾಡಲಾಗಿದೆ. ಎಲ್ಲಾ ಇಲಾಖೆಗಳಲ್ಲೂ ಈ ರೀತಿಯ ಸಂಬಳ ನೀಡ್ತಾರೆ. ಆದರೆ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ತಿಳಿಸಿದರು.
ಬೊಮ್ಮಾಯಿ ನಮ್ಮ ಸಾರಿಗೆ ಇಲಾಖೆ ಕುರಿತು ಟ್ವೀಟ್ ಮಾಡಿದ್ದರು, ಅರ್ಧ ಸಂಬಳ ಆಂತ ಆರೋಪ ಮಾಡಿದ್ರು. ಆದರೆ ಪೂರ್ಣ ಮಾಹಿತಿ ಇಲ್ಲದೇ ಈ ರೀತಿಯ ಹೇಳಿಕೆ ನೀಡಬಾರದು. ಅವರು ಹಿಂದೆ ಸಿಎಂ ಆಗಿದ್ದವರು. ಅವರ ಅವಧಿಯಲ್ಲಿ ಯಾವರೀತಿ ಸಮಸ್ಯೆ ಆಗಿತ್ತು ಅಂತ ಎಲ್ಲರಿಗೂ ಗೊತ್ತು. ಈಗ ನಮಗೆ ನೀತಿ ಹೇಳೋಕೆ ಬರ್ತಾರೆ ಎಂದು ಬಿಜೆಪಿ ಆರೋಪಕ್ಕೆ ಸಚಿವ ರಾಮಲಿಂಗರೆಡ್ಡಿ ಟಾಂಗ್ ನೀಡಿದರು.
ಶಾಸಕರು ಹಾಗೂ ಸಚಿವರ ನಡುವೆ ಅಸಮಾಧಾನ ವಿಚಾರವಾಗಿ ಮಾತನಾಡಿ, ಸಣ್ಣಪುಟ್ಟ ಅಸಮಾಧಾನ ಇರುತ್ತೆ, ಇಲ್ಲ ಅಂತ ಏನಿಲ್ಲ. ಆದರೆ ಎಲ್ಲವನ್ನೂ ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಲೋಕಸಭಾ ಚುನಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರು ಹಲವು ಸಲಹೆ ನೀಡಿದ್ದಾರೆ. ಗ್ಯಾರಂಟಿ ಜಾರಿ ಯೋಜನೆಗಳ ಸಮರ್ಪಕ ಜಾರಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಕುರಿತು ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದಾರೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.