ಕೋಲಾರ : ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಸಾರ್ವಜನಿಕರಿಗೆ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ಯಾವುದೇ ಕಲುಷಿತ ಅಂಶಗಳು ಕಂಡುಬರದಂತೆ ಅತ್ಯಂತ ಜಾಗರೂಕತೆ ವಹಿಸಬೇಕು. ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ಲೋಪವೆಸಗುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಡೆದ ’ಕುಡಿಯುವ ನೀರು ಮತ್ತು ಬೇಸಿಗೆ ಸಿದ್ಧತಾ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸಭೆಯಲ್ಲಿ ನೀರಿನ ಗುಣಮಟ್ಟದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಪ್ರತಿ ವಾರವೂ ಕಡ್ಡಾಯವಾಗಿ ನೀರಿನ ಮಾದರಿಗಳನ್ನು ಪರೀಕ್ಷಿಸಬೇಕು ಎಂದು ಸೂಚಿಸಿದರು.
ಚಿತ್ರದುರ್ಗದ ಘಟನೆಯಿಂದ ನಾವು ಪಾಠ ಕಲಿಯಬೇಕಿದೆ. ಪೈಪ್ಲೈನ್ಗಳಲ್ಲಿ ಸೋರಿಕೆ ಉಂಟಾಗಿ ಒಳಚರಂಡಿ ನೀರು ಮಿಶ್ರಣವಾಗದಂತೆ ನೋಡಿಕೊಳ್ಳುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಎಂದರಲ್ಲದೆ, ಪ್ರತಿ ೧೦ ದಿನಕ್ಕೊಮ್ಮೆ ಎಫ್ಟಿಕೆ ಕಿಟ್ಗಳ ಮೂಲಕ ಪರೀಕ್ಷೆ ನಡೆಸಬೇಕು ಮತ್ತು ಎಲ್ಲಾ ಓವರ್ಹೆಡ್ ಟ್ಯಾಂಕ್ಗಳನ್ನು ನಿಯಮಿತವಾಗಿ ಕ್ಲೋರಿನೇಷನ್ ಮಾಡಬೇಕು ಎಂದು ಆದೇಶಿಸಿದರು.
ಖಾಸಗಿ ಆರ್.ಒ ಘಟಕ ಹಾಗೂ ಟ್ಯಾಂಕರ್ ನಿಯಂತ್ರಣ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಕ್ಯಾನ್ ನೀರು ಪೂರೈಸುವ ವೆಂಡರ್ಗಳ ಮೇಲೆ ನಿಗಾವಹಿಸಲು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಅನಧಿಕೃತವಾಗಿ ನೀರು ಮಾರಾಟ ಮಾಡುವವರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಘಟಕಗಳನ್ನು ತಕ್ಷಣವೇ ಬಂದ್ ಮಾಡಿ ಎಂದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ೧,೨೩೯ ಗ್ರಾಮೀಣ ಮತ್ತು ೧೧೮ ನಗರ ಆರ್.ಒ ಘಟಕಗಳಿದ್ದು, ದುರಸ್ತಿಯಲ್ಲಿರುವ ಘಟಕಗಳನ್ನು ಕೂಡಲೇ ಸರಿಪಡಿಸುವಂತೆ ’ಮಿಷನ್ ಮೋಡ್ ಆದೇಶ ನೀಡಿದರು. ಜಿಲ್ಲೆಯ ಗ್ರಾಮೀಣ ಭಾಗದ ೧೭೬ ಗ್ರಾಮಗಳು ಹಾಗೂ ನಗರ ಪ್ರದೇಶದ ೫೨ ವಾರ್ಡ್ಗಳಲ್ಲಿ ಮುಂಬರುವ ಮೂರು ತಿಂಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ನೀರಿನ ಕೊರತೆ ಎದುರಾದಲ್ಲಿ ತಕ್ಷಣವೇ ನೀರು ಪೂರೈಸಲು ಜಿಲ್ಲೆಯಲ್ಲಿ ೭೦ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಬಂಗಾರಪೇಟೆ, ಕೆ.ಜಿ.ಎಫ್ ಮತ್ತು ಮಾಲೂರು ತಾಲೂಕಿನ ಒಟ್ಟು ೧೧ ಹಳ್ಳಿಗಳಿಗೆ ಬಾಡಿಗೆ ಬೋರ್ವೆಲ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.
ಕಳೆದ ವರ್ಷಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ೨೦೧೯ರಲ್ಲಿ ಸರಾಸರಿ ೭೭.೦೬ ಮೀಟರ್ ಇದ್ದ ಅಂತರ್ಜಲ ಮಟ್ಟವು, ೨೦೨೫ರ ಅಂತ್ಯಕ್ಕೆ ೩೭.೫೨ ಮೀಟರ್ಗೆ ಸುಧಾರಿಸಿದೆ. ಕೊಳವೆಬಾವಿ ಕೊರೆಯುವ ಸರಾಸರಿ ಆಳವು ಸಹ ೧೨೫೦-೧೩೫೦ ಅಡಿಗಳಿಂದ ೧೦೬೧-೧೧೫೮ ಅಡಿಗಳಿಗೆ ಇಳಿಕೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ೩,೦೩,೪೪೨ ಟನ್ ಮೇವು ಲಭ್ಯವಿದ್ದು, ಇದು ಮುಂದಿನ ೨೫ ವಾರಗಳಿಗೆ ಸಾಕಾಗಲಿದೆ. ಜಿಲ್ಲೆಯ ೧,೩೧೬ ನೀರಿನ ತೊಟ್ಟಿಗಳ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ್.ಪಿ.ಬಾಗೇವಾಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿಶಂಕರ್, ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ರಮೇಶ್, ಹಿರಿಯ ಭೂವಿಜ್ಞಾನಿ ತಿಪ್ಪೆಸ್ವಾಮಿ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಅಂಬಿಕಾ, ನಗರಸಭೆ ಆಯುಕ್ತರು ನವೀನ್ ಚಂದ್ರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಂದನ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



