ಯೋಜನೆಯ ಪಲಾನುಭವಿಗಳಿಗೆ ಶೂನ್ಯ ಮೊತ್ತದ ಬಿಲ್ ವಿತರಿಸುವ ಮೂಲಕ ಸಚಿವ ನಾಗೇಂದ್ರ ಚಾಲನೆ
ಬಳ್ಳಾರಿ:ಸರ್ಕಾರವು ಅನುಷ್ಟಾನಗೊಳಿಸುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಯ ಕುಟುಂಬಗಳು ಬೆಳಗುವಂತಾಗಬೇಕು ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹ ಜ್ಯೋತಿ ಯೋಜನೆಯ (ಉಚಿತ ಬೆಳಕು, ಸುಸ್ಥಿರ ಬದುಕು ಎಂಬ ಆಶಯದಂತೆ) ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಜನರಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ಈ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ “ಗೃಹ ಜ್ಯೋತಿ” ಯೋಜನೆಯು ಇಂದು ಚಾಲನೆಗೊಳ್ಳುತ್ತಿದೆ. ಇದರಿಂದ ಪ್ರತಿ ಮನೆಯ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಉಜ್ವಲ ದೀಪದಂತೆ ಬೆಳಗಬೇಕು ಎಂದು ಹೇಳಿದರು.
ಸರ್ಕಾರದ ಪಂಚ ಯೋಜನೆಗಳನ್ನು ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬಡವರಿಗೆ ಉಪಯೋಗವಾಗುವಂತಹ ಯೋಜಗಳನ್ನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು. ಜಿಲ್ಲೆಯ ಜನರ ಅಭಿಪ್ರಾಯಗಳನ್ನು ತೆಗೆದುಕೊಂಡು ಎಲ್ಲ ಶಾಸಕರು ಒಡಗೂಡಿ, ಜಿಲ್ಲೆಯ ಅಭಿವೃದ್ಧಿಗೆ ಪಂಚ ಪಾಂಡವರಂತೆ ಶ್ರಮಿಸುವೆವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐದು ಫಲಾನುಭವಿಗಳಿಗೆ ಶೂನ್ಯ ಮೊತ್ತದ ಬಿಲ್ ನ್ನು ಜಿಲ್ಲಾ ಉಸ್ತುವಾರಿ ಸಚಿವರು ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ,ನಗರ ಶಾಸಕ ನಾರಾಭರತ್ ರೆಡ್ಡಿ, ಸಂಡೂರು ಶಾಸಕ, ತುಕಾರಾಮ್, ಕಂಪ್ಲಿ ಶಾಸಕ, ಜೆ.ಎನ್. ಗಣೇಶ್ ಸೇರಿದಂತೆ ಮಹಾನಗರ ಪಾಲಿಕೆಯ ಮಹಾಪೌರರಾದ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಬಳ್ಳಾರಿ ಜೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರರ ವೆಂಕಟೇಶುಲು ಉಪಸ್ಥಿತರಿದ್ದರು.